ರಾಯಚೂರು: ಪ್ರತಿ ವರ್ಷದಂತೆ ಈ ವರ್ಷವೂ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರಾಜೇಂದ್ರ ಗಂಜ್ ಆವರಣದಲ್ಲಿ ಬುಧವಾರ ಉಸುಕಿನ ಚೀಲ ಹಾಗೂ ಕಲ್ಲು ಹೊರುವ ಸ್ಪರ್ಧೆಯು ಆರಂಭಗೊಂಡಿತು.
ರಾಜೇಂದ್ರ ಗಂಜ್, ರೈಸ್ ಮಿಲ್ ಹಾಗೂ ಕೈಗಾರಿಕಾ ಪ್ರದೇಶ ಹಮಾಲರ ಸಂಘ ಹಾಗೂ ಗಂಜ್ ಕಸಗೂಡಿಸುವ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘ ಮತ್ತು ರೈತ ಸಮುದಾಯದ ಸಂಯುಕ್ತ ಆಶ್ರಯದಲ್ಲಿ ಇದನ್ನು ಆಯೋಜನೆ ಮಾಡಲಾಗಿತ್ತು.
ಹಮಾಲರಿಗೆ 110 ಕೆ.ಜಿ. ಉಸುಕಿನ ಚೀಲ ಹೊತ್ತು ನಡೆಯುವ ಸ್ಪರ್ಧೆ, ರೈತರಿಗೂ 110 ಕೆ.ಜಿ ಉಸುಕಿನ ಚೀಲ ಹೊತ್ತು ನಡೆದಾಡುವ ಸ್ಪರ್ಧೆ ಹಾಗೂ ಗಂಜ್ ಆವರಣದಲ್ಲಿ ಕಸಗುಡಿಸುವ ಮಹಿಳೆಯರಿಗೆ ಎರಡೂ ಕೈಯಲ್ಲಿ ತಲಾ 10 ಕೆ.ಜಿ ಭಾರವಾದ ತೂಕದ ಕಲ್ಲು ಹೊತ್ತು ನಡೆದಾಡುವ ಸ್ಪರ್ಧೆ ನಡೆಸಲಾಯಿತು.
ಸ್ಪರ್ಧೆ ಉದ್ಘಾಟಿಸಿದ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು, ಈ ರೀತಿ ಸ್ಪರ್ಧೆ ನಡೆಸುವುದರಿಂದ ದುಡಿಯುವ ಸಮುದಾಯಕ್ಕೆ ಮನರಂಜನೆ, ಉತ್ಸಾಹ ದೊರಕುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಸ್ ಈರಣ್ಣ (ಲಾಲಪ್ಪ), ವರ್ಷದಿಂದ ವರ್ಷಕ್ಕೆ ಇದರಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಸ್ಪರ್ಧೆಗೆ ಸಾಕಷ್ಟು ಆಯೋಜಕರೂ ದೊರಕಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ವಿರೋಧ ಪಕ್ಷದ ನಾಯಕ ಜಿ.ಬಸವರಾಜ ರೆಡ್ಡಿ, ಆರ್.ಡಿ.ಎ. ಅಧ್ಯಕ್ಷ ರಾಜಕುಮಾರ, ಮುನ್ನೂರು ಕಾಪು ಸಮಾಜ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ನಗರಸಭೆ ಸದಸ್ಯರಾದ ಟಿ. ಮಲ್ಲೇಶ, ಬಿ. ತಿಮ್ಮಾರೆಡ್ಡಿ, ಕೆ. ನಲ್ಲಾರೆಡ್ಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ. ಶೇಖರರೆಡ್ಡಿ, ಆರ್.ಡಿ.ಎ ಸದಸ್ಯ ರವಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.