ADVERTISEMENT

ಎರಡೂ ಕನಕನ ಕಿಂಡಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಉಡುಪಿ: ಕೃಷ್ಣಮಠದೊಳಗಿನ ಕನಕನ ಕಿಂಡಿಗೆ ನವಗ್ರಹ ಶಬ್ದ ಸೇರಿಸುವ ವಿಷಯದಲ್ಲಿ ಕುರುಬ ಸಮಾಜಕ್ಕೆ ಅಸಮಾಧಾನವಾಗುವುದಾದರೆ, ಸಮಾಜದ ಸಾಮರಸ್ಯ ದೃಷ್ಟಿಯಿಂದ ಎರಡು ಕಿಂಡಿಗಳನ್ನೂ ~ಕನಕನ ಕಿಂಡಿ~ ಎಂದೇ ಕರೆಯಲು ತಮ್ಮ ವಿರೋಧವಿಲ್ಲ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. 

ಕೃಷ್ಣಮಠದ ಒಳಗಿನ ಕನಕನ ಕಿಂಡಿಯನ್ನು ~ಕನಕ ನವಗ್ರಹ ಕಿಂಡಿ~ ಎಂದು ಕರೆಯಲೇಬೇಕು ಎನ್ನುವ ಬಗ್ಗೆ ತಮ್ಮದೇನೂ ಆಗ್ರಹವಿಲ್ಲ. ಕನಕನ ಕಿಂಡಿ ಹೆಸರಿನ ಕುರಿತು ಕುರುಬ ಸಮಾಜಕ್ಕೆ ತೀವ್ರ ಅಸಮಾಧಾನವಾಗಿರುವುದು ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಪರ್ಯಾಯ ಕಾಲದಲ್ಲಿ ಕುರುಬ ಸಮಾಜದ ಎಲ್ಲಾ ಮುಖಂಡರು ಹಾಗೂ ಕನಕಪೀಠದ ಅಂದಿನ ಹಿರಿಯ ಸ್ವಾಮೀಜಿ ಅಭಿಪ್ರಾಯ ಪಡೆದೇ ಈ ನಾಮಕರಣ ಮಾಡಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

~ಕನಕನ ಅನುಯಾಯಿಗಳೂ ಕೃಷ್ಣಭಕ್ತರೂ ಆದ ಕುರುಬ ಸಮಾಜದ ಬಗ್ಗೆ ವಿಶೇಷ ಅಭಿಮಾನ-ಆತ್ಮೀಯತೆ ಇದೆ. ಅಷ್ಟಮಠಾಧಿಪತಿಗಳಿಗೆ ಕನಕರ ಬಗ್ಗೆ ವಿಶೇಷ ಗೌರವವಿರುವುದರಿಂದ ಎರಡೂ ಕಿಂಡಿಗಳನ್ನು ಕನಕನ ಕಿಂಡಿ ಎಂದೇ ಕರೆಯಲು ಅವರೆಲ್ಲರ ಒಪ್ಪಿಗೆ ಇದೆ ಎಂಬ ಭರವಸೆ ತಮಗಿದೆ.
 
ಹೊರಗೆ ಗೋಪುರದ ಬಳಿಯಿರುವ ಕಿಂಡಿ ಹಾಗೂ ಎಲ್ಲರೂ ಕೃಷ್ಣದರ್ಶನ ಮಾಡುವ ಒಳಗಿನ ಕಿಂಡಿಯನ್ನೂ ಕನಕನ ಕಿಂಡಿ ಎಂದು ಕರೆಯುವಂತೆ ಎಲ್ಲಾ ಮಾಧ್ಯಮದವರಲ್ಲೂ ಮನವಿ ಮಾಡುವೆ~ ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.