ADVERTISEMENT

ಕಡೂರು- ಬೀರೂರಿಗೆ ಕುಡಿವ ನೀರು ಶೀಘ್ರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬೀರೂರು: ಭದ್ರಾ ನದಿಯಿಂದ ಕಡೂರು ಮತ್ತು ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಶೀಘ್ರ  ಆರಂಭವಾಗಲಿದೆ ಎಂದು ಶಾಸಕ ಡಾ.ವೈ.ಸಿ.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಬೀರೂರು ಪಟ್ಟಣದಲ್ಲಿ ಭಾನುವಾರ ನಡೆದ ಮೆಹ್ತಾ ಸಜ್ಜನರಾಜ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀರೂರು ಪಟ್ಟಣದವರೆಗೆ ಪೈಪ್ ಅಳವಡಿಕೆ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ದೊಡ್ಡಘಟ್ಟದ ಬಳಿ ಸಂಗ್ರಹಣಾಗಾರ ನಿರ್ಮಾಣವೂ ತ್ವರಿತವಾಗಿ ಸಾಗುತ್ತಿದೆ. ಅವಳಿ ಪಟ್ಟಣಗಳಲ್ಲಿ ಟ್ಯಾಂಕ್ ನಿರ್ಮಾಣ ಮುಗಿಯುವ ಹಂತದಲ್ಲಿದ್ದು ಇನ್ನು ನಾಲ್ಕು ತಿಂಗಳ ಒಳಗೆ ಕುಡಿಯುವ ನೀರು ಪೂರೈಕೆ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೈನ ಸಮುದಾಯ ಸಮಾಜಕ್ಕೆ ಮಾದರಿಯಾಗಿದ್ದು, ತಾವು ದುಡಿದ ಹಣದಲ್ಲಿ ಸ್ವಲ್ಪ ಪಾಲು ಸಮಾಜದ ಒಳಿತಿಗೆ ಮೀಸಲಿಡುವ ಮತ್ತು ಶ್ರದ್ಧೆಯಿಂದ ದುಡಿಯುವ ಮನೋಭಾವ ಹೊಂದಿದ್ದು ಸಮಾಜದ ಪ್ರಗತಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಡೂರು ಪದವಿ ಕಾಲೇಜು ಸಮುಚ್ಚಯಕ್ಕೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದು ಅವರಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಅರವಟಿಗೆ ನಿರ್ಮಿಸಲು ಸಜ್ಜನರಾಜ್ ಮೆಹ್ತಾ ಅವರ ನೆನಪಿನಲ್ಲಿ ಅವರ ಕುಟುಂಬ 1.1 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಕುಟುಂಬ ಸದಸ್ಯ ಗೌತಮ್ ಮೆಹ್ತಾ ಹೇಳಿದರು. ಈ ಕಾರ್ಯ ಶೀಘ್ರ ಆರಂಭಿಸಿ ಹಣದ ಕೊರತೆ ಕಂಡು ಬಂದರೆ ಇನ್ನೂ ಹೆಚ್ಚಿನ ಹಣ ಭರಿಸುವುದಾಗಿ ಅವರು ತಿಳಿಸಿದರು.

ಜೈನ ಸಮುದಾಯದ ನಾಗರಾಜ್, ದಿಲೀಪ್, ಪ್ರಸನ್ನ, ಪುರಸಭಾ ಸದಸ್ಯ ಎಸ್.ಎಸ್.ದೇವರಾಜ್ ಮುಂತಾದವರು ಸಮಾರಂಭದಲ್ಲಿ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.