ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಆಹಾರ, ನೀರು ಸೇವಿಸದೆ 11ಗಂಟೆಯಲ್ಲಿ ಮೈಸೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದ ಜಾದೂಗಾರ ಸಮರ್ಥ್ ಶೆಣೈ ಅವರು ನೂತನ ಲಿಮ್ಕಾ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ. ಬುಧವಾರ ಸಂಜೆ 6 ಗಂಟೆಗೆ ಪುರಭವನದ ಮುಂಭಾಗಕ್ಕೆ ಬಂದ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಬೆಳಿಗ್ಗೆ 7 ಗಂಟೆಗೆ ಮೈಸೂರು ಅರಮನೆಯಿಂದ ಹೊರಟಿದ್ದ ಅವರ ಪ್ರತಿಯೊಂದು ನಡೆಯೂ ವಿಡಿಯೊ ಕ್ಯಾಮೆರಾದಲ್ಲಿ ದಾಖಲಾಗುತ್ತಿತ್ತು. ಆರು ಮಂದಿ ಬೈಕ್ ಸವಾರರು, ವಿಡಿಯೊ ಚಿತ್ರೀಕರಣ ವ್ಯಾನ್, ಜಾಹೀರಾತು ಪ್ರಸಾರ ವಾಹನದ ಜತೆಯಲ್ಲಿ ಮಂಗಳೂರಿನತ್ತ ಹೊರಟ ಅವರು ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ನಡುವೆ ಎಲ್ಲೂ ಬಿಚ್ಚದೆ ತಮ್ಮ ಟಿವಿಎಸ್ ವೆಗೊ ಸ್ಕೂಟರ್‌ನಲ್ಲಿ ಮಂಗಳೂರು ತಲುಪಿಬಿಟ್ಟರು.
~ನಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 300 ಕಿ.ಮೀ. ಕ್ರಮಿಸಿ ಬಂದಿದ್ದೇನೆ. ನಡುವೆ ನೀರು ಕುಡಿಯಬೇಕೆಂದೆನಿಸಿದರೂ ನಮ್ಮ ಜತೆಗೆ ನೀರು ತಂದಿಲ್ಲದ ಕಾರಣ ನೀರು ಕುಡಿದೇ ಇಲ್ಲ.  ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದೇನೆ. ನನ್ನ ಈ ಸಾಧನೆಯನ್ನು ದೇಶದ 66ನೇ ಸ್ವಾತಂತ್ರ್ಯ ದಿನಾಚರಣೆಗೆ ಸಮರ್ಪಿಸುತ್ತಿದ್ದೇನೆ~ ಎಂದು ಅವರು ತಿಳಿಸಿದರು. (ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 150 ಕಿ.ಮೀ. ಕ್ರಮಿಸಿದ ಲಾಸ್ ಏಂಜಲೀಸ್ ವ್ಯಕ್ತಿಯೊಬ್ಬರ ಹೆಸರಲ್ಲಿ ಲಿಮ್ಕಾ ದಾಖಲೆ ಇದೆ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.