ಗದಗ: ಕನ್ನಡ ಸಾಹಿತ್ಯದ ದೇಸಿ ಸೊಗಡನ್ನು ಅತ್ಯಂತ ಸಶಕ್ತವಾಗಿ ಬಳಸಿಕೊಂಡು ಭಾಷೆಯನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಮುಸ್ಲಿಮರಿಗೂ ಸಲ್ಲುತ್ತದೆ ಎಂದು ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗದಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಸಾಪ ಆಜೀವ ಸದಸ್ಯತ್ವದ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ನಿತ್ಯೋತ್ಸವದ ಹಿರಿಮೆ ಗರಿಮೆಯನ್ನು ನೀಡಿದ ಶ್ರೇಯಸ್ಸು ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ಸಲ್ಲುತ್ತದೆ ಎಂದರು.
ಸಂತ ಶಿಶುನಾಳ ಶರೀಫರು ದೇಶ ಮತ್ತು ಭಾಷೆಯ ಸೊಗಡನ್ನು ಅರ್ಥಗರ್ಭಿತವಾಗಿ ತಮ್ಮ ತತ್ವ ಪದಗಳಲ್ಲಿ ಬಳಸಿಕೊಂಡು ಜನಸಾಮಾನ್ಯರನ್ನೂ ತಲುಪಿದ್ದಾರೆ. ಅದೇ ಪರಂಪರೆಯಲ್ಲಿ ಸೂಫಿ ಸಂತರು, ಬಂದೇ ನವಾಜರು ಉರ್ದುವಿನಲ್ಲಿ ಬರೆದ ತತ್ವ ಪದಗಳು ಕನ್ನಡಕ್ಕೂ ಸ್ಪರ್ಷತೆ ನೀಡಿವೆ ಎಂದರು.
ಮಂಗಳೂರಿನ `ಶಾಂತಿ ಪ್ರಕಾಶನ~ ಕನ್ನಡದಲ್ಲಿ 200ಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದೆ. ಈ ಕಾರ್ಯವನ್ನೆಲ್ಲ ಮುಸ್ಲಿಂ ಸಾಹಿತಿಗಳು, ವಿದ್ವಾಂಸರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿದ್ದು ಅಭಿನಂದನೀಯ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎಚ್.ಬೇಲೂರ, ಗದಗ ಜಿಲ್ಲಾ ಜಮಾತೆ ಇಸ್ಲಾಮ್ ಹಿಂದ್ ಸಂಘಟನೆಯ ಅಧ್ಯಕ್ಷ ಕೆ.ಐ.ಶೇಖ್ ಮಾತನಾಡಿದರು.
ಪ್ರಾಚ್ಯವಸ್ತು ಸಂಶೋಧಕ ಅ.ದ.ಕಟ್ಟಿಮನಿ ಸ್ವಾಗತಿಸಿದರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕವಿತಾ ದಂಡಿನ ನಿರೂಪಿಸಿದರು, ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು.
ಆರ್.ಜಿ.ಚಿಕ್ಕಮಠ, ಎಂ.ಎನ್ ತಮ್ಮನಗೌಡ್ರ, ಎ.ಎಸ್.ಖವಾಸ, ಜುನೇದ್ ಉಮಚಗಿ, ಬಿ.ಎಸ್.ಇಂಡಿ, ಬಿ.ಜಿ.ಹಿರೇಮಠ, ಜಿ.ಎಸ್.ಯತ್ನಟ್ಟಿ, ಡಿ.ಎಸ್.ತಳವಾರ, ಎಂ.ಎಂ.ಶಿರಹಟ್ಟಿ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.