ADVERTISEMENT

ಕಬ್ಬು ಹಣ ಬಾಕಿ: ಪ್ರತಿಭಟನೆ ತೀವ್ರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಮುಧೋಳ: ಕಬ್ಬು ಬೆಳೆಗೆ ಬೆಲೆ ನಿಗದಿ ಮಾಡಬೇಕು ಹಾಗೂ ಹಿಂದಿನ ವರ್ಷದ ಬಾಕಿ ಹಣ ಪಾವತಿಸಬೇಕೆಂದು ಒತ್ತಾಯಿಸಿ ರೈತರು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ತೀವ್ರಗೊಂಡಿದೆ.

ಆಕ್ರೋಶಗೊಂಡ ರೈತರು ಕಬ್ಬು ಸಾಗಣೆ ಮಾಡುತ್ತಿದ್ದ ಹಲವು ಟ್ರ್ಯಾಕ್ಟರ್‌ಗಳನ್ನು ತಡೆದು ನಿಲ್ಲಿಸಿ ಕಬ್ಬು ಸಾಗಾಟಕ್ಕೆ ತಡೆಯೊಡ್ಡಿದರು. ಕಳೆದ 19 ದಿನಗಳಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಶುಕ್ರವಾರದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ರಮೇಶ ಗಡದಣ್ಣವರ, ಪ್ರಸಕ್ತ ಸಾಲಿನಲ್ಲಿ ಪೂರೈಕೆಯಾಗುವ ಪ್ರತಿ ಟನ್ ಕಬ್ಬಿಗೆ 2,200 ರೂಪಾಯಿ ನೀಡಬೇಕು ಎಂದು ಆಗ್ರಹಿಸಿದರು. 2009-10 ನೇ ಸಾಲಿನ ಬಾಕಿ ಹಣವನ್ನು ಪೂರ್ತಿಯಾಗಿ ಪಾವತಿಸಬೇಕು. ಅಲ್ಲಿಯವರೆಗೆ ಕಾರ್ಖಾನೆಗಳನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

`ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಖಾನೆಗಳಿಗೆ ಹಲವಾರು ಬಾರಿ ಮಾಡಿರುವ ಒತ್ತಾಯ ಫಲ ನೀಡಿಲ್ಲ. ಆದರೆ ಮುಖ್ಯಮಂತ್ರಿಗಳು ನವೆಂಬರ್ 4ರಂದು ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆ ಕರೆದು ದರ ನಿಗದಿಗೊಳಿಸುವದಾಗಿ ಭರವಸೆ ನೀಡಿರುವುದರಿಂದ ಅಲ್ಲಿಯವರೆಗೆ ಕಾದು ನೋಡಲಾಗುವುದು. ನಂತರ ಕಬ್ಬು ಬೆಳೆಗಾರರು ಹೋರಾಟದ ಮುಂದಿನ ರೂಪುರೇಷೆ ಸಿದ್ಧಪಡಿಸುತ್ತಾರೆ~ ಎಂದು ಗಡದಣ್ಣವರ ಹೇಳಿದರು.

ನಾಗೇಶ ಸೋರಗಾಂವಿ ಮಾತನಾಡಿ, 2009-10ನೇ ಸಾಲಿನ ಎರಡನೇ ಕಂತಿನ ಹಣವನ್ನು ನೀಡುವುದಾಗಿ ಎಲ್ಲ ಕಾರ್ಖಾನೆಗಳು ಒಪ್ಪಿಕೊಂಡಿದ್ದರೂ  ಹಲವು ಕಾರ್ಖಾನೆಗಳು ಇದನ್ನು ಪಾವತಿ ಮಾಡಿಲ್ಲ ಎಂದು ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.