ADVERTISEMENT

ಕಸಾಪ ಜಿಲ್ಲಾ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಮಡಿಕೇರಿ: ಕೊಡಗು ಜಿಲ್ಲೆಯ ಕನ್ನಡಾಭಿಮಾನಿಗಳ ಬಹುದಿನಗಳ ಕನಸಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.

ಸುದರ್ಶನ ಅತಿಥಿ ಗೃಹದ ಬಳಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಸಾಪ ರಾಜ್ಯ ಘಟಕದ ಅಧ್ಯಕ್ಷ ನಲ್ಲೂರು ಪ್ರಸಾದ್ ಪಾಲ್ಗೊಂಡಿದ್ದರು. 

ಎಸ್.ಬಂಗಾರಪ್ಪ ಅವರು 1988ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ (ಸುಮಾರು 24 ವರ್ಷಗಳ ಹಿಂದೆ) ಭವನ ನಿರ್ಮಾಣಕ್ಕೆ ದೊರೆತ ನಿವೇಶನದಲ್ಲಿ ಮಂಗಳವಾರಸ ಶಂಕುಸ್ಥಾಪನೆ ನೆರವೇರಿತು.

ಸುಮಾರು 60 ಸೆಂಟ್ ಜಾಗವಿದ್ದು, ರೂ 1.30 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.  ಅನುದಾನ ದೊರೆತರೆ 11 ತಿಂಗಳಲ್ಲಿಯೇ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವುದಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕರ ಅನುದಾನದಿಂದ ಅಗತ್ಯವಾದ ಆರ್ಥಿಕ ಸಹಕಾರ ನೀಡುವುದಾಗಿ ಶಾಸಕ ಅಪ್ಪಚ್ಚು ರಂಜನ್ ಮತ್ತು ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಭರವಸೆ ನೀಡಿದರು. 

ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಮಾತನಾಡಿ, ಎಲ್ಲಾ ಜಿಲ್ಲೆಗಳಲ್ಲಿಯೂ ಸಾಹಿತ್ಯ ಭವನ ನಿರ್ಮಿಸಲು ತಲಾ ರೂ. 1 ಕೋಟಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಯವರನ್ನು ಕೋರಲಾಗುವುದು ಎಂದು ತಿಳಿಸಿದರು.

ಇದೇ ರೀತಿ ಪ್ರತಿಯೊಂದು ತಾಲ್ಲೂಕು ಘಟಕಗಳಲ್ಲಿಯೂ ಕನ್ನಡ ಭವನ ನಿರ್ಮಿಸಬೇಕೆಂದು ಜಿ.ಪಂ. ಉಪಾಧ್ಯಕ್ಷ ಎಚ್.ಎಂ. ಕಾವೇರಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.