ADVERTISEMENT

ಕಾಂಪೌಂಡ್‌ಗಾಗಿ ವಿದ್ಯಾರ್ಥಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಕೋಲಾರ: ಹೊಸದಾಗಿ ಕಾಂಪೌಂಡ್ ನಿರ್ಮಿಸಲು ಗೋಡೆ ಕೆಡವಿ ಮೂರು ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ. ಪರಿಣಾಮವಾಗಿ ಹಲವು ಸಮಸ್ಯೆಗಳನ್ನು ಎದರಿಸಬೇಕಾಗಿದೆ ಎಂದು ಆರೋಪಿಸಿ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾಂಪೌಂಡ್ ಶಿಥಿಲವಾದ ಕಾರಣ ಮರುನಿರ್ಮಾಣಕ್ಕಾಗಿ ಮೂರು ತಿಂಗಳ ಹಿಂದೆ ಗುತ್ತಿಗೆದಾರರು ಕಾಂಪೌಂಡ್ ಕೆಡವಿದ್ದರು. ಆದರೆ ನಂತರ ಕಾಮಗಾರಿ ಸ್ಥಗಿತಗೊಂಡಿದೆ. ತರಗತಿಗಳಿಗೆ ಮತ್ತು ಪ್ರಯೋಗಾಲಯಕ್ಕೆ ತೊಂದರೆಯಾಗಿದೆ. ಭದ್ರತೆಯೂ ಇಲ್ಲವಾಗಿದೆ. ಮುಖ್ಯರಸ್ತೆ ಕಸ, ದೂಳು ಎಲ್ಲವೂ ಕಾಲೇಜು ಆವರಣದೊಳಗೆ ಸೇರುತ್ತಿವೆ. ಸಾರ್ವಜನಿಕರ ಬಯಲು ಮೂತ್ರಾಲಯವಾಗಿಯೂ ಆವರಣ ಬಳಕೆಯಾಗುತ್ತಿದ್ದು ದುರ್ವಾಸನೆಯೂ ಮೂಡಿದೆ ಎಂದು ಟೀಕಿಸಿದರು.

ಕಾಂಪೌಂಡ್ ನಿರ್ಮಿಸಲು ಕೋರಿ ಪ್ರಾಂಶುಪಾಲರು ಬರೆದ ಪತ್ರಕ್ಕೂ ಇಲಾಖೆ ಮಹತ್ವ ನೀಡಿಲ್ಲ. ಶೌಚಾಲಯ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ವಿದ್ಯುತ್ ಸ್ಥಗಿತಗೊಂಡಿರುವುದಾಗಿ ದೂರಿದರು. ಕಾರ್ಯಪಾಲಕ ಎಂಜಿನಿಯರ್ ವೆಂಕಟಾಚಲ ದೂರವಾಣಿ ಮೂಲಕ ಭರವಸೆ ನೀಡಿದ ಮೇರೆಗೆ ಧರಣಿ ನಿಲ್ಲಿಸಿದರು.

 ವೇದಿಕೆಯ ಬಿ. ಸುರೇಶ್‌ಗೌಡ, ಪ್ರಜ್ವಲ್, ಬಸವರಾಜ್, ರಾಮಾಂಜಿ, ನಾಗರಾಜ್, ವಿಕಾಸ್ ಬೈರೇಗೌಡ, ಅಶೋಕ್, ಶ್ರೀಧರ್, ವಿ.ರಾಜೇಶ್, ನಾಗೇಂದ್ರ, ವಿಶ್ವನಾಥ್, ರೂಬಿನ್, ಮಹೇಶ್, ನಾಗೇಶ್, ಕೃಷ್ಣ, ಚೇತನ್ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.