ADVERTISEMENT

ಕಾಡಾನೆ ಹಾವಳಿ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಶನಿವಾರಸಂತೆ: `ಸ್ಥಳಾಂತರ ಮಾಡಿದರೂ ಕಾಡಾನೆಗಳು ನಾಡಿಗೆ ಬರುತ್ತಿವೆ. ಆದ್ದರಿಂದ ಕಾಡಾನೆಗಳೊಂದಿಗೆ ಸಹಬಾಳ್ವೆ ನಡೆಸುವ ಕುರಿತು ಕಾಡಂಚಿನ ಗ್ರಾಮಸ್ಥರಿಗೆ ಸರ್ಕಾರ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆನೆ-ಮಾನವ ಸಂಘರ್ಷ ಅಧ್ಯಯನ ಸಮಿತಿ ಸದಸ್ಯರಿಗೆ ಹಂಪಾಪುರ ಜನತೆ ಅಹವಾಲು ಸಲ್ಲಿಸಿದರು.

 ಕೊಡ್ಲಿಪೇಟೆ ಹೋಬಳಿ ಹಂಪಾಪುರಕ್ಕೆ ಮಂಗಳವಾರ ಭೇಟಿ ನೀಡಿದ್ದ ಡಾ.ರಾಮನ್ ಸುಕುಮಾರನ್ ನೇತೃತ್ವದ ಆನೆ-ಮಾನವ ಸಂಘರ್ಷ ಅಧ್ಯಯನ ಸಮಿತಿಯು ಗ್ರಾಮದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ  ಕಾಡಾನೆ ದಾಳಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದರು. ಕಾಡಾನೆಗಳ ನಿರಂತರ ದಾಂದಲೆಯಿಂದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಬೇಸತ್ತಿದ್ದಾರೆ.  ಸಂಜೆಯಾದರೆ ಮನೆಯಿಂದ ಹೊರಬರಲು ಭಯಪಡುವಂಥ ಸ್ಥಿತಿ ಇದೆ ಎಂದು ಗ್ರಾಮಸ್ಥರು ತಿಳಿಸಿದರು.

 ಕಾಡಾನೆ ದಾಳಿಗೆ ನೀರು ಹಾಗೂ ಆಹಾರದ ಕೊರತೆಯೇ ಕಾರಣ. ಕಾಡಿನಲ್ಲಿ ಬೀಟೆಮರಗಳನ್ನು ಕಡಿದು ಆನೆ ಮೇವು ಬೆಳೆಯಬೇಕು. ನೀರಿನ ವ್ಯವಸ್ಥೆ ಮಾಡಬೇಕು. ಸೋಲಾರ್ ಅಳವಡಿಸಲು ಒಂದು ಎಕರೆ ಕಾಫಿ ತೋಟಕ್ಕೆ ರೂ. 10 ಸಾವಿರ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ಹೋಬಳಿಯ 25 ಕಾಡಾನೆಗಳ ಸ್ಥಳಾಂತರವಾಗಬೇಕು. ಜನಸಂಖ್ಯೆ ಅಧಿಕವಾಗಿರುವುದೂ ಆನೆ-ಮಾನವ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡರು.

ಗ್ರಾಮಸ್ಥರಾದ ಜಿ.ಆರ್.ಸುಬ್ರಹ್ಮಣ್ಯ, ಯತೀಶ್‌ಕುಮಾರ್, ಎಚ್.ಎಸ್.ಗಿರೀಶ್, ಶಿವಕುಮಾರ್, ಶರತ್‌ಚಂದ್ರ, ಭಗವಾನ್, ಅಬ್ಬಾಸ್, ಡಿ.ಎಸ್.ತಮ್ಮಯ್ಯ, ಕೆ.ಆರ್.ಮಲ್ಲೇಗೌಡ, ವಿಜಯ್‌ಕುಮಾರ್, ಕೆ.ಪಿ.ನಾಗೇಶ್, ಕಾಂತರಾಜ್, ಇಕ್ಬಾಲ್, ವಿನೂತಶಂಕರ್, ಶಶಿಕುಮಾರ್ ಇತರರು ಪಾಲ್ಗೊಂಡಿದ್ದರು.

ಅಧ್ಯಯನ ತಂಡದಲ್ಲಿ ಬಸಪ್ಪನವರ್, ಬಿ.ಕೆ.ಸಿಂಗ್, ಬಿ.ಆರ್.ದೀಪಕ್, ಅಜಯ್‌ಮಿಶ್ರ, ಡಾ.ಬಿಸ್ಟ್, ಎಂ.ಡಿ.ಮಧುಸೂದನ್, ಶರತ್‌ಚಂದ್ರಲೇಲೆ ಇದ್ದರು. ಆನೆ-ಮಾನವ ಸಂಘರ್ಷದ ಅಧ್ಯಯನ ವರದಿಯನ್ನು ಇದೇ ಏಪ್ರಿಲ್‌ನೊಳಗೆ ಸಲ್ಲಿಸುವುದಾಗಿ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.