ದಾವಣಗೆರೆ: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಿಗೆ ಕಾಯಂ ಶಿಕ್ಷಕರ ನೇಮಕ ಮಾಡಬೇಕು ಎಂದು ಆಗ್ರಹಿಸಿ `ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್~ ಕಾರ್ಯಕರ್ತರು ಹಾಗೂ ಡಿ.ಇಡಿ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು `ಅತಿಥಿ ಶಿಕ್ಷಕ~ ಪದ್ಧತಿಯನ್ನೇ ರದ್ದುಗೊಳಿಸಬೇಕು. ಪ್ರಾಥಮಿಕ ಶಾಲೆಗಳಿಗೆ ಕಾಯಂ ಶಿಕ್ಷಕರ ನೇಮಕ ಮಾಡಬೇಕು. ಎಲ್ಲಾ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. `ದುಡಿಯುವ ಕೈಗಳಿಗೆ ಕೆಲಸ ಕೊಡಿ; ಇಲ್ಲವೇ ನಿರುದ್ಯೋಗ ಭತ್ಯೆ~ ನೀಡಿ ಎಂದು ಘೋಷಣೆ ಕೂಗಿದರು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್ ಮಾತನಾಡಿ, 12,000 ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಡಿ.ಇಡಿ ಪದವೀಧರರಿಗೆ ಎಸಗುತ್ತಿರುವ ದ್ರೋಹ. ಕಾಯಂ ಹುದ್ದೆಗಳಿಗೆ ಕಾಯಂ ನೇಮಕಾತಿ ಮಾಡಿಕೊಳ್ಳುವ ಬದಲು `ಅತಿಥಿ ಶಿಕ್ಷಕ~ ಎಂಬ ಹೆಸರಿನಡಿ ಹುದ್ದೆ ನೇಮಕ ಮಾಡಿಕೊಂಡು ಹುದ್ದೆಗಳನ್ನು ಸಂಪೂರ್ಣ ಮುಚ್ಚಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.
ಜತೆಗೆ, `ಇ-ಟೆಂಡರ್~ ಮೂಲಕ ಖಾಲಿ ಇರುವ ಹುದ್ದೆಗೆ ನೇಮಕಾತಿ ಪ್ರಸ್ತಾವ ಈಗ ಕೇಳಿಬರುತ್ತಿದೆ. ಒಂದುವೇಳೆ ಈ ಪದ್ಧತಿ ಹೀಗೆ ಮುಂದುವರಿದರೆ ಇನ್ನೂ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕುವಾಡ ಮಾತನಾಡಿ, ಅತಿಥಿ ಶಿಕ್ಷಕರ ನೇಮಕ ಬಾಲಿಶವಾದದ್ದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಖಾಲಿ ಇರುವ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಂಡಿಲ್ಲ. ಅತಿಥಿ ಶಿಕ್ಷಕರ ನೇಮಕಾತಿ ಕ್ರಮದ ಹೇಳಿಕೆ ಹಿಂದೆ ರಾಜಕೀಯ ಹಾಗೂ ಚುನಾವಣಾ ತಂತ್ರ ಅಡಗಿದೆ ಎಂದು ಆಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.