ADVERTISEMENT

ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಹುಳಿಯಾರು: ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಸಮಾವೇಶಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಳೆದ ಐದಾರು ವರ್ಷಗಳಿಂದ ಕಾಲೇಜಿಗೆ ಮೂಲ ಸೌಕರ್ಯ ಒದಗಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ಪೊಲೀಸ್ ಠಾಣೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲ ಕಾಲ ಸಾಂಕೇತಿಕ ರಸ್ತೆತಡೆ ನಡೆಸಿದರು. ಅಲ್ಲಿಂದ ನಾಡ ಕಚೇರಿವರೆಗೆ ಮೆರವಣಿಗೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸಿದರು.

ವಿದ್ಯಾರ್ಥಿ ನಾಯಕಿ ಲಕ್ಷ್ಮೀ ಕಾಲೇಜಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಸ್ಥಳಕ್ಕೆ ಬಂದು ನಮ್ಮ ಮನವಿ ಆಲಿಸುವಂತೆ ಪಟ್ಟು ಹಿಡಿದರು. ತಹಶೀಲ್ದಾರ್ ಉಮೇಶಚಂದ್ರ ಅವರಿಗೆ ತಮ್ಮ ಸಮಸ್ಯೆ ತಿಳಿಸಿ, ಖುದ್ದು ತಾವೇ ಕಾಲೇಜಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡುವಂತೆ ಆಗ್ರಹಿಸಿದರು.

ಕಾಲೇಜಿಗೆ ಭೇಟಿ ನೀಡಿದ ತಹಶೀಲ್ದಾರ್ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಉಪನಿರ್ದೇಶಕರ ಗಮನಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದರು.ರೈತ ಸಂಘದ ಸತೀಶ್, ಮಲ್ಲೇಶ್, ಎಬಿವಿಪಿಯ ಇಮ್ರಾಜ್, ಟಿಪ್ಪುಸುಲ್ತಾನ್ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.