ADVERTISEMENT

ಕುಗ್ರಾಮದ ಹುಡುಗಿಗೆ ಕುಸ್ತಿಯಲ್ಲಿ ಬಂಗಾರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST

ಲಕ್ಕುಂಡಿ, ಗದಗ: ಅಪ್ಪ-ಅಮ್ಮನನ್ನು ಊರಲ್ಲಿ ಬಿಟ್ಟು ಗುರುಗಳ ಮನೆಯಲ್ಲಿದ್ದು, ನಿತ್ಯ ಬೆಳ್ಳಂಬೆಳಿಗ್ಗೆ ಪಕ್ಕದ ಗದುಗಿಗೆ ಕುಸ್ತಿ ತರಬೇತಿಗಾಗಿ ಓಡುತ್ತಿದ್ದಳು ಆ ಹುಡುಗಿ. ಜಿಲ್ಲಾ ಕ್ರೀಡಾ ಹಾಸ್ಟೆಲ್ ಅಂಗಳದಲ್ಲಿ ಕುಸ್ತಿ ತರಬೇತಿ ಮುಗಿಸಿಕೊಂಡು ಮತ್ತೆ ಊರಿಗೆ ಬರುವುದು, ಅಲ್ಲಿಂದ ಶಾಲೆಗೆ ಹೋಗುವುದು, ಶಾಲೆಯಿಂದ ಮರಳಿದ ಮೇಲೆ ಮತ್ತೆ ಹಾಸ್ಟೆಲ್ ಕಡೆಗೆ ಓಡುವುದು... ಆಕೆಯ ದಿನಚರಿ ಆಗಿತ್ತು. ಅವಳ ನಾಲ್ಕು ವರ್ಷಗಳ ಇಂತಹ ಕಠಿಣ ಪರಿಶ್ರಮಕ್ಕೆ ದೂರದ ಕಿರ್ಗಿಸ್ತಾನದಲ್ಲಿ ಬಂಗಾರದ ಪದಕವೇ ಒಲಿದಿದೆ.

ಲಕ್ಕುಂಡಿ ಹತ್ತಿರದ ಅಸುಂಡಿ ಎಂಬ ಕುಗ್ರಾಮದ ಪ್ರೇಮಾ ಹುಚ್ಚಣ್ಣವರ, ಕಿರ್ಗಿಸ್ತಾನದ ಬಿಸ್ಕೆಕ್‌ನಲ್ಲಿ ಈಚೆಗೆ ನಡೆದ ಏಷ್ಯನ್ ಸಬ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನ ಬಾಲಕಿಯರ ಫ್ರೀಸ್ಟೈಲ್ 38 ಕೆಜಿ  ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾಳೆ. ತನ್ನ ಬಂಗಾರದ ಹಾದಿಯಲ್ಲಿ ಐವರನ್ನು ಚಿತ್ ಮಾಡುವ ಮೂಲಕ ದೇಶದ ಕುಸ್ತಿರಂಗವೇ ಖುಷಿಪಡುವಂತೆ ಮಾಡಿದ್ದಾಳೆ.

ಅಸುಂಡಿ ಗ್ರಾಮದಿಂದ ಪ್ರೇಮಾ ಶಾಲೆಗೆ ಹೋಗುವುದೂ ಸಮಸ್ಯೆ ಎನಿಸಿತ್ತು. ತರಬೇತಿಗೆ ಹೋಗುವುದು ಸಾಧ್ಯವೇ ಇರಲಿಲ್ಲ. ಕೋಚ್ ಶರಣಗೌಡ ಬೇಲೇರಿ ಪ್ರೇಮಾ ಮಾತ್ರವಲ್ಲದೆ ಇಂತಹ ಸಮಸ್ಯೆ ಎದುರಿಸುತ್ತಿದ್ದ ಇನ್ನೂ ನಾಲ್ವರು ಹುಡುಗಿಯರಿಗೆ ತಮ್ಮ ಮನೆಯಲ್ಲೇ ಆಶ್ರಯ ಒದಗಿಸಿದರು. ಗ್ರಾಮಾಂತರ ಭಾಗದ ಈ ಪ್ರತಿಭೆಗಳಿಗೆ ಕುಸ್ತಿ ದೀಕ್ಷೆಯನ್ನೂ ನೀಡಿದರು.

ಶರಣಗೌಡರ ಪತ್ನಿಯೂ ತಮ್ಮ ಪತಿಯ ಉದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡು, ಈ ಕುಸ್ತಿಪಟುಗಳು ಗದಗ ಬಸ್ ಹಿಡಿಯುವ ಹೊತ್ತಿಗೆ ಬುತ್ತಿ ಕಟ್ಟಿಕೊಡುತ್ತಾರೆ. ಬಸ್ ನಿಲ್ದಾಣದಲ್ಲಿ ಇಳಿದ ತಕ್ಷಣವೇ ಈ ಹುಡುಗಿಯರ ತಂಡ ತಾಲೀಮಿಗಾಗಿ ಹಾಸ್ಟೆಲ್‌ನ ಕುಸ್ತಿ ಅಖಾಡದತ್ತ ಓಡುತ್ತದೆ. ಅಲ್ಲಿ ಶರಣಗೌಡರಿಂದ ತಂತ್ರಗಾರಿಕೆ ಪಾಠ. ಹೊಸ ಪಟ್ಟುಗಳ ಕಲಿಕೆ. ಭಾರತದ ಕುಸ್ತಿ ಕ್ಯಾಂಪ್‌ಗೆ ಆಯ್ಕೆಯಾಗಿದ್ದ ಸುಮಾರಾಣಿ ಕೂಡ ಇವರಿಗೆ ಸಾಥ್ ಕೊಡುತ್ತಾರೆ.

ಪ್ರೇಮಾ ಮೂಲತಃ ಹಾಕಿ ಆಟಗಾರ್ತಿ. ಎತ್ತರ ಸಾಲದೆ ಹಾಸ್ಟೆಲ್‌ಗೆ ಆಯ್ಕೆಯಾಗದಿದ್ದಾಗ ಅವಳಲ್ಲಿ ಕುಸ್ತಿ ಕನಸನ್ನು ತುಂಬಿದವರು ಕೋಚ್ ಬೇಲೇರಿಯವರು. ನಂತರ ಈಕೆ ಜೈಪುರದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಕೂಟದ ಕುಸ್ತಿ ಸ್ಪರ್ಧೆಯಲ್ಲಿ ಬಂಗಾರ ಗೆದ್ದರಲ್ಲದೆ, ಶಿರ್ಸಾದಲ್ಲಿ ನಡೆದ ಕೂಟದಲ್ಲಿ ಮತ್ತೊಂದು ಚಿನ್ನದ ಪದಕ ಗೆದ್ದಳು. ಹಿಮಾಚಲಪ್ರದೇಶದ ನಾಲಗಡದಲ್ಲಿ ನಡೆದ ಕೆಡೆಟ್ ಕುಸ್ತಿಯಲ್ಲಿಯೂ ಚಿನ್ನ ಗೆದ್ದಳು.

ಬಿಸ್ಕಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದಿಂದ ಹತ್ತು ಜನ ಬಾಲಕಿಯರು ಪಾಲ್ಗೊಂಡಿದ್ದರು. ಪದಕ ಗೆದ್ದಿದ್ದು ಪ್ರೇಮಾ ಮಾತ್ರ. ಅಸುಂಡಿಯ ಈ ಹುಡುಗಿ ಮಾತ್ರವಲ್ಲದೆ ಬಸಿರಾ ವಕಾರದ, ಶಾಹಿದಾ ಬಳಿಗಾರ ಮತ್ತು ಸಹಿರಾಬಾನು ಭರವಸೆ ಮೂಡಿಸಿರುವ ಕುಸ್ತಿಪಟುಗಳಾಗಿದ್ದಾರೆ. ಪ್ರೇಮಾ ತಂದೆ ರಮೇಶರೆಡ್ಡಿ ಕೃಷಿಕರಾಗಿದ್ದಾರೆ.

ಮಗಳ ಭವಿಷ್ಯದ ಬಗೆಗೆ ಕಳಕಳಿ ವ್ಯಕ್ತಪಡಿಸುವ ಅವರು, ಎಲ್ಲವೂ `ನಮ್ಮ ಸರ್‌ಗೆ ಗೊತ್ತು~ ಎನ್ನುತ್ತಾ ಶರಣಗೌಡರ ಕಡೆ ಕೈತೋರುತ್ತಾರೆ. ಲಖನೌನಲ್ಲಿ 17ರಿಂದ ನಡೆಯಲಿರುವ ವಿಶ್ವ ಕಿರಿಯರ ಕುಸ್ತಿ ಚಾಂಪಿಯನ್‌ಷಿಪ್ ಕ್ಯಾಂಪ್‌ಗೆ ಆಯ್ಕೆಯಾಗಿರುವ ಪ್ರೇಮಾ ಮಾತ್ರ, `ನನ್ನ ಗುರುಗಳಿಂದಲೇ ನಾನು ಈ ಮಟ್ಟ ತಲುಪಲು ಸಾಧ್ಯವಾಯಿತು~ ಎಂದು ಕೃತಜ್ಞತೆಯಿಂದ ಕಣ್ಣು ತುಂಬಿಕೊಂಡು ಹೇಳುತ್ತಾಳೆ. ಈ ಪ್ರತಿಭೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವವರು ಸಂಪರ್ಕಿಸಬೇಕಾದ ಸಂಖ್ಯೆ: 9880037735
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.