ಕೋಲಾರ: `ಕಳೆದ ಒಂದು ವರ್ಷದಿಂದ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು~ ಎಂದು ಆಗ್ರಹಿಸಿ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ತಿರುಮಲಕೊಪ್ಪ ಗ್ರಾಮಸ್ಥರು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರಿಗೆ ಸೋಮವಾರ ಇಲ್ಲಿ ಮನವಿ ಸಲ್ಲಿಸಿದರು.
`10 ತಿಂಗಳ ಹಿಂದೆ ಗ್ರಾಮಕ್ಕೆ ಕೊಳವೆ ಬಾವಿ ಮಂಜೂರಾದರೂ, ಕೆಲವು ಗ್ರಾಮಸ್ಥರ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಬಹುದು ಎಂಬ ಉದ್ದೇಶದಿಂದ ಕೊರೆಯುವ ಕೆಲಸಕ್ಕೆ ತಡೆಯೊಡ್ಡಲಾಗಿತ್ತು. ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದರಿಂದ ಮೂರು ತಿಂಗಳ ಹಿಂದೆ ಕೊಳವೆ ಬಾವಿ ಕೊರೆಯಲಾಗಿತ್ತು. ಆದರೆ ಭೂವಿಜ್ಞಾನಿಗಳು ಗುರುತಿಸಿದ್ದ ಸ್ಥಳದಲ್ಲಿ ಕೊರೆಯದೆ ಬೇರೊಂದು ಕಡೆ ಕೊರೆದ ಪರಿಣಾಮ ಕೇವಲ 15-20 ದಿನದಲ್ಲಿ ನೀರು ಬತ್ತಿ ಹೋಯಿತು. ಅಂದಿನಿಂದ ಮತ್ತೆ ನೀರಿನ ಸಮಸ್ಯೆ ಎದುರಾಗಿದೆ~ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ವಿವರಿಸಿದರು.
ನೀರಿಗಾಗಿ ಕೃಷಿ ಚಟುವಟಿಕೆ, ಕೂಲಿ ಕೆಲಸವನ್ನು ಬದಿಗೊತ್ತಿ ಗ್ರಾಮಸ್ಥರು ಅಲೆದಾಡುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಂಡು ಅವರ ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮದ ಮುಖಂಡರು ಕೋರಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೀನಾ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಮುಖಂಡ ಗೋಪಾಲಪ್ಪ, ವೆಂಕಟೇಶಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.