ADVERTISEMENT

ಕೃಷಿ ಉಳಿದರೆ ಕೊಡಗು ಉಳಿದಂತೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ಮಡಿಕೇರಿ: ಕೊಡಗಿನಲ್ಲಿ ಕೃಷಿ ಭೂಮಿಯನ್ನು ಮಾರಾಟ ಮಾಡುವುದನ್ನು ನಿಲ್ಲಿಸದಿದ್ದರೆ ಸ್ಥಳೀಯ ಸಂಸ್ಕೃತಿ ನಾಶವಾಗುವ ಅಪಾಯವಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಆತಂಕ ವ್ಯಕ್ತಪಡಿಸಿದರು.

ಸಮೀಪದ ಅಮ್ಮಂಗಾಲ (ವಾಲ್ನೂರ್) ಬಳಿ ಚೇಂದಂಡ ಜೆಮ್ಸಿ ಪೊನ್ನಪ್ಪ ಅವರ ಗದ್ದೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಭಾನುವಾರ ಏರ್ಪಡಿಸಿದ್ದ `ಕೊಡವ ಸಂಸ್ಕೃತಿ- ಬೊಳೆ ಸಂಸ್ಕೃತಿ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ನೆಲದ ಸಂಸ್ಕೃತಿಯು ಇಲ್ಲಿನ ಕೃಷಿ ಮೇಲೆ ಅವಲಂಬಿತವಾಗಿದೆ.

ಕೊಡಗು ಕೃಷಿ ಪ್ರಧಾನವಾದ ಜಿಲ್ಲೆ. ಕೃಷಿ ಭೂಮಿ ಹಾಗೂ ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದರೆ ಕೊಡಗು ಕೊಡಗಾಗಿ ಉಳಿಯುವುದಿಲ್ಲ ಎಂದರು. 

 ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಬ್ಬೀರ ಸರಸ್ವತಿ, ಪತ್ರಕರ್ತ ಅಜ್ಜಿನಿಕಂಡ ಮಹೇಶ ನಾಚಯ್ಯ, ಬಲ್ಲಾರಂಡ ಮಣಿ ಉತ್ತಪ್ಪ, ಚೇಂದಂಡ ಜೆಮ್ಸಿ ಪೊನ್ನಪ್ಪ ಮಾತನಾಡಿದರು.

ಅಕಾಡೆಮಿ ಸದಸ್ಯ ಮಾಳೇಟಿರ ಅಭಿಮನ್ಯುಕುಮಾರ್ ಸ್ವಾಗತಿಸಿದರು. ವಾಲ್ನೂರ್ ಕೊಡವ ಕೂಟದ ಅಧ್ಯಕ್ಷ ಮಾದಪ್ಪಂಡ ಕುಶಾಲಪ್ಪ, ಜಿ.ಎಸ್.ಮೋಹನ್, ಗ್ರಾಮದ ಹಿರಿಯರಾದ ಕೊಂಗೇರ ಬೋಪಯ್ಯ, ಪೊನ್ನಂಪೇಟೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಜಿ.ಎಸ್.ಮೋಹನ್ ಇತರರು ಭಾಗವಹಿಸಿದ್ದರು.

ನಾಟಿ ಮಾಡುವ ಸ್ಪರ್ಧೆ, ಗದ್ದೆ ಓಟ, ಹಗ್ಗ-ಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಮಹಿಳೆಯರು, ಪುರುಷರು, ಮಕ್ಕಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.