ADVERTISEMENT

ಕೃಷಿ ಭೂಮಿ ಮಾರುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 19:25 IST
Last Updated 13 ಮಾರ್ಚ್ 2011, 19:25 IST

ತುಮಕೂರು: ಕೃಷಿ ಭೂಮಿ ಮಾರುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಕೃಷಿ ನೀತಿಗಳು  ರಚನೆಯಾಗುತ್ತಿವೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.ವೀ.ಚೀ.ಸಾಹಿತ್ಯ ಪ್ರತಿಷ್ಠಾನ, ಧರಣಿ ಮಂಡಲ, ಅರ್ಥಶಾಸ್ತ್ರ ವೇದಿಕೆ, ಸಿದ್ದಗಂಗಾ ಪದವಿ ಕಾಲೇಜು ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ಕೃಷಿ ಬಜೆಟ್’ ಚರ್ಚೆಯಲ್ಲಿ ಮಾತನಾಡಿದರು.

ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಕೃಷಿ ಬಜೆಟ್ ರೈತರಿಗೆ ಪೂರಕವಾಗಿಲ್ಲ. ಕೇವಲ ಪ್ರತ್ಯೇಕ ವರದಿ ವಾಚನವಾಗಿತ್ತು. ಬಹುರಾಷ್ಟ್ರೀಯ ಬಿತ್ತನೆ ಬೀಜ ಕಂಪೆನಿಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇದರಿಂದ ರೈತರ ಬದುಕು ಅಧೋಗತಿಗೆ ಇಳಿಯುತ್ತಿದೆ ಎಂದು ವಿಷಾದಿಸಿದರು.

ರೈತರಿಗೆ ಸಾಲದ ಬದಲು ಯೋಗ್ಯ ಹಾಗೂ ವೈಜ್ಞಾನಿಕ ಬೆಲೆ ನಿರ್ಧಾರವಾಗಬೇಕು. ರಾಜ್ಯದಲ್ಲಿ ಈಗಾಗಲೇ ಶೇ. 50ರಷ್ಟು ಸಹಕಾರಿ ಸಂಘಗಳು ಮುಚ್ಚಿವೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಸರ್ಕಾರ ಈಗಲಾದರೂ ಸಹಕಾರಿ ಸಂಘಗಳಿಗೆ ಕಾಯಕಲ್ಪ ನೀಡಬೇಕೆಂದು ಒತ್ತಾಯಿಸಿದರು.

ಕಳೆದ ಎರಡು ವರ್ಷದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ. 65ರಿಂದ 59ಕ್ಕೆ ಇಳಿದಿರುವುದು ದುರಂತಕ್ಕೆ ಸಾಕ್ಷಿ. ಯೋಜನೆ ಮಾಡುವ ಆರ್ಥಿಕ ತಜ್ಞರಿಗೆ ದೀರ್ಘಾಲೋಚನೆ ಇರಬೇಕು. ಕೃಷಿಕರ ಬದುಕು ಹದಗೆಟ್ಟರೆ ದೇಶದಲ್ಲಿ ಅಭದ್ರತೆ ಕಾಡುತ್ತದೆ ಎಂದರು. ಶಾಸಕ, ಮಾಜಿ ಕೃಷಿ ಸಚಿವ, ಟಿ.ಬಿ.ಜಯಚಂದ್ರ, ಮುಖಂಡರಾದ ವಿ.ಗಾಯತ್ರಿ, ಎಸ್.ವೈ.ಗುರುಶಾಂತ್, ಕೆ.ಸಿ.ರೆಡ್ಡಿ, ಸಿ.ಯತಿರಾಜು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.