ADVERTISEMENT

ಕೆಆರ್‌ಎಸ್ ಭರ್ತಿಗೆ ಶಾಸಕದ್ವಯರಿಂದ ಹೋಮ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯ ಶೀಘ್ರ ಭರ್ತಿಯಾಗಲಿ ಎಂದು ಹಾರೈಸಿ ಶಾಸಕರಾದ ರಮೇಶ ಬಂಡಿಸಿದ್ದೇಗೌಡ ಹಾಗೂ ಸಿ.ಎಸ್.ಪುಟ್ಟರಾಜು ಬುಧವಾರ ಜಲಾಶಯದ ಕಾವೇರಿ ಮಾತೆ ಪ್ರತಿಮೆ ಬಳಿ ನವಗ್ರಹ ಹೋಮ ನಡೆಸಿದರು.

ಬೆಂಬಲಿಗರ ಜತೆ ಇಲ್ಲಿಗೆ ಆಗಮಿಸಿದ ಶಾಸಕದ್ವಯರು ಸುಮಾರು ಒಂದೂವರೆ ತಾಸು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಾಗೇಂದ್ರ ಪ್ರಸಾದ್ ಅಯ್ಯರ್ ನೇತೃತ್ವದ ವೈದಿಕರ ತಂಡ ನವಗ್ರಹ ಹೋಮ, ಗಣಪತಿ ಪೂಜೆ ಇತರ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟಿತು.
 
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಪತ್ನಿ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದರು. ಶಾಸರ ಜತೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಿ.ಎಂ.ಸ್ವಾಮಿಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಟಿ.ಶ್ರೀನಿವಾಸ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ಈ ಬಾರಿ ಮುಂಗಾರು ಸಕಾಲಕ್ಕೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಬ್ಬು ಇತರ ಬೆಳೆಗಳು ಒಣಗುತ್ತಿವೆ. ಜಲಾಶಯಕ್ಕೆ ನೀರು ಬಾರದ ಕಾರಣ ಬತ್ತದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ದೋಷ ನಿವಾರಣೆಗಾಗಿ ನವಗ್ರಹ ಹೋಮ ನಡೆಸಿದ್ದು, ಮಳೆಗಾಗಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.