ADVERTISEMENT

ಕೆಡಿಸಿಸಿ ಬ್ಯಾಂಕ್ ಕರ್ಕಿ ಶಾಖೆಯಲ್ಲಿ ಕಳ್ಳತನ: ರೂ 42 ಲಕ್ಷ ನಗ ನಾಣ್ಯ ಲೂಟಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಹೊನ್ನಾವರ: ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕಿನ ಕರ್ಕಿ ಶಾಖೆಯಲ್ಲಿ ಬುಧವಾರ ರಾತ್ರಿ ಬಾಗಿಲಿನ ಬೀಗ ಮತ್ತು ಕಿಟಕಿ ಸರಳು ಮುರಿದು ಒಳನುಗ್ಗಿದ ಕಳ್ಳರು 47 ಲಕ್ಷ ರೂಪಾಯಿ ನಗ ನಾಣ್ಯ ದೋಚಿಕೊಂಡು ಪರಾರಿಯಾಗಿದ್ದಾರೆ.

ಮೂರು ಕೆ.ಜಿ 508 ಗ್ರಾಂ ಬಂಗಾರದ ಆಭರಣಗಳು ಹಾಗೂ ರೂ 1.95 ಲಕ್ಷ  ನಗದು ಕಳುವಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಗಜಾನನ ಹೆಗಡೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ಯಾಂಕಿನ ಒಳಕೋಣೆಯಲ್ಲಿದ್ದ ಎರಡು ಕಬ್ಬಿಣದ ಪೆಟ್ಟಿಗೆಗಳ ಬಾಗಿಲನ್ನು ಯಂತ್ರದ ಮೂಲಕ ಕತ್ತರಿಸಿ, ಅದರಲ್ಲಿದ್ದ ಒಡವೆ ಹಾಗೂ ನಗದು ದೋಚಿದ್ದಾರೆ. ಜೊತೆಗೆ ಬ್ಯಾಂಕಿನ ಮುಂಬಾಗಿಲಿನ ಪಕ್ಕದಲ್ಲಿ ಅಳವಡಿಸಲಾಗಿದ್ದ ಸೈರನ್ ತಂತಿಯನ್ನು ಕತ್ತರಿಸಿದ್ದಾರೆ.

ADVERTISEMENT

ಈ ಕೃತ್ಯವನ್ನು ನೋಡಿದರೆ ವೃತ್ತಿಪರ ಕಳ್ಳರ ಜೊತೆಗೆ ಪರಿಚಿತರು ಶಾಮೀಲಾಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಕಳ್ಳರ ಪತ್ತೆಗೆ ಶ್ವಾನದಳದ ಸೇವೆಯನ್ನು ಬಳಸಲಾಯಿತಾದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಕೆಲ ವರ್ಷಗಳ ಹಿಂದೆ ತಾಲ್ಲೂಕಿನ ವಿಕಾಸ ಬ್ಯಾಂಕ್‌ನಿಂದ ಸುಮಾರು ಐದು ಕೆ.ಜಿ. ಚಿನ್ನ ಕಳುವಾಗಿತ್ತು. ಈ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.