ADVERTISEMENT

ಕೇಂದ್ರೀಯ ವಿವಿ: ಪ್ರತ್ಯೇಕ ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಗುಲ್ಬರ್ಗ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ 2012- 13ನೇ ಶೈಕ್ಷಣಿಕ ವರ್ಷದಿಂದ ಪ್ರತ್ಯೇಕ ದಿನದಂದು ಪರೀಕ್ಷೆ ನಡೆಸಲಾಗುವುದು ಎಂದು ಕುಲಪತಿ ಡಾ. ಎ.ಎಂ. ಪಠಾಣ ಶನಿವಾರ ತಿಳಿಸಿದರು.

ರಾಜ್ಯದ ಇತರ ವಿ.ವಿ.ಗಳೊಂದಿಗೆ ಒಂದೇ ಸಮಯದಲ್ಲಿ ಪ್ರವೇಶ ಪರೀಕ್ಷೆ ನಡೆಸುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅರ್ಥಶಾಸ್ತ್ರ ಹಾಗೂ ಮನಶ್ಶಾಸ್ತ್ರ ಓದುವುದಕ್ಕೆ ಸಾಮಾನ್ಯವಾಗಿ ಎಲ್ಲ ಕಡೆಯೂ ಉತ್ತಮ ಪ್ರತಿಕ್ರಿಯೆ ಇದೆ.

ಕೇಂದ್ರೀಯ ವಿವಿಗೆ ಈ ಬಾರಿ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದಿರುವುದಕ್ಕೆ ಪ್ರವೇಶ ಪರೀಕ್ಷೆಗೆ ನಿಗದಿಗೊಳಿಸಿದ್ದ ದಿನಾಂಕ ಪ್ರಮುಖ ಕಾರಣ ಎಂದು ಗೊತ್ತಾಗಿದೆ. ಮುಂದಿನ ವರ್ಷದಿಂದ ಈಗಿರುವ ಎಂಟು ವಿಭಾಗಗಳೊಂದಿಗೆ ಭೌತಶಾಸ್ತ್ರ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಗೌರವ ಡಾಕ್ಟರೇಟ್: ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ವಿಜ್ಞಾನಿ ಪ್ರೊ. ಗೋವರ್ಧನ ಮೆಹ್ತಾ ಹಾಗೂ ಸಾಫ್ಟ್‌ವೇರ್ ತಜ್ಞ ನಂದನ ನಿಲೇಕಣಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಧರಿಸಿದೆ ಎಂದು ತಿಳಿಸಿದರು.

ವಿವಿ ಪ್ರಥಮ ಘಟಿಕೋತ್ಸವ ಸಮಾರಂಭವು ಇಲ್ಲಿನ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಇದೇ 28ರಂದು ನಡೆಯಲಿದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.