ADVERTISEMENT

ಕೊಡಗಿಗೆ 100 ಕೋಟಿ ಅನುದಾನ: ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಮಡಿಕೇರಿ:  ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಹಾಗೂ ಇತರರ ನಿಯೋಗ ಬುಧವಾರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕುಡಿಯುವ ನೀರು ಹಾಗೂ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನೆರವು ಒದಗಿಸುವಂತೆ ಮನವಿ ಮಾಡಿತು.

ಜಿಲ್ಲಾ ಪಂಚಾಯ್ತಿಯ ಆಡಳಿತ ಪಕ್ಷದ ಸದಸ್ಯರು, ಮೂರು ತಾಲ್ಲೂಕುಗಳ ತಾ.ಪಂ. ಅಧ್ಯಕ್ಷರು ಹಾಗೂ ವಿರಾಜಪೇಟೆ ತಾಲ್ಲೂಕು ಹೊರತುಪಡಿಸಿ ಇತರ ಎರಡು ತಾ.ಪಂ.ಗಳ ಉಪಾಧ್ಯಕ್ಷರು ಈ ನಿಯೋಗದಲ್ಲಿದ್ದರು.

ಕುಡಿಯುವ ನೀರು ಪೂರೈಕೆಗೆ 50 ಕೋಟಿ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ನಿಯೋಗ ಮನವಿ ಮಾಡಿತು. ಅಲ್ಲದೆ, ಇತರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆಯೂ ನಿಯೋಗ ಕೋರಿತು. ಈ ಬಗ್ಗೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಜಿ.ಪಂ. ಅಧ್ಯಕ್ಷ ರವಿಕುಶಾಲಪ್ಪ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಭೇಟಿ ಮಾಡಿದ್ದ ನಿಯೋಗ, ಕೊಡಗು ಜಿಲ್ಲೆಯಲ್ಲಿ ಅನಿಯಮಿತ ವಿದ್ಯುತ್ ಕಡಿತ ನಿಲ್ಲಿಸಬೇಕು ಹಾಗೂ ಕುಂಟುತ್ತಾ ಸಾಗಿರುವ ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯನ್ನು ಮಳೆಗಾಲದೊಳಗೆ ಮುಗಿಸಲು ‘ಸೆಸ್ಕ್’ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT