ADVERTISEMENT

ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಕನಕಪುರ: ತಾಲ್ಲೂಕಿನಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ತಾಮಸಂದ್ರ ಗ್ರಾಮದ ದೀಪಿಕಾ ಮತ್ತು ಆಕೆಯ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಕೊಲೆಯಾದ ದೀಪಿಕಾ ಅವರ ತಾಯಿ ಗೌರಮ್ಮ, ತಾತ ಮೂಗೇಗೌಡ ಬಂಧಿತ ಆರೋಪಿಗಳು. ಕಳೆದ ಮಾರ್ಚ್1 ರಂದು ದೀಪಿಕಾ ಹಾಗೂ ಆಕೆಯ ನಾಲ್ಕು ತಿಂಗಳ ಹಸುಗೂಸನ್ನು ಮರ್ಯಾದಾ ಹತ್ಯೆ ಹೆಸರಿನಲ್ಲಿ ಬರ್ಭರವಾಗಿ ಹತ್ಯೆ ಮಾಡಿ ಸುಟ್ಟುಹಾಕಲಾಗಿತ್ತು. ಹತ್ಯೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸ್ನಳ್ಳಿ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ಎರಡು ತಂಡಗಳನ್ನು ರಚಿಸಲಾಗಿತ್ತು. ಆದರೆ ಕೊಲೆಯಾಗಿ 20 ದಿನ ಕಳೆದರೂ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆರೋಪಿಗಳ ಪರವಾಗಿ ರಾಜಕೀಯ ವ್ಯಕ್ತಿಗಳು ಪ್ರಬಲ  ಒತ್ತಡ ಹೇರುತ್ತಿರುವುದರಿಂದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಎಂಬ ಆರೋಪ ಸಹ ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು. 

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆದೇಶಿಸಿದ್ದರು.  ಹೆಚ್ಚಿದ ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ಕೊನೆಗೂ ಮೃತಳ ತಾಯಿ ಗೌರಮ್ಮ ಹಾಗೂ ತಾತ ಮೂಗೇಗೌಡನನ್ನು ಬಂಧಿಸಿ ಕೊಲೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.