ADVERTISEMENT

ಕೋಮು ಸೌಹಾರ್ದ ವೇದಿಕೆಗೆ 10 ವರ್ಷ: 29 ರಂದು ಐಕ್ಯತಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ಮಂಗಳೂರು: ಹತ್ತು ವರ್ಷಗಳ ಹಿಂದೆ ಬಾಬಾಬುಡನ್‌ಗಿರಿ ವಿವಾದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವಿವಿಧ ಕೋಮುಗಳ ನಡುವೆ ಸಾಮರಸ್ಯ ಮೂಡಿಸುವಲ್ಲಿ ಶ್ರಮಪಟ್ಟಿದ್ದು, ಸಂಘ ಪರಿವಾರದ ಪ್ರಯೋಗ ಭೂಮಿ ಎಂದೇ ಇದೀಗ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಇದೇ 29ರಂದು `ಐಕ್ಯತಾ ಸಮಾವೇಶ' ಹಮ್ಮಿಕೊಂಡಿದೆ.

ಇಲ್ಲಿನ ಸೇಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ 29ರಂದು ಬೆಳಿಗ್ಗೆ 9.30ರಿಂದ ರಾತ್ರಿ 8.30ರವರೆಗೆ ವಿವಿಧ ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ಖ್ಯಾತ ಕೋಮುವಾದ ವಿರೋಧಿ ಹಾಗೂ ಮಾನವ ಹಕ್ಕು ಹೋರಾಟಗಾರರಾದ ತೀಸ್ತಾ ಸೆಟ್ಲವಾಡ್, ಡಾ.ಆನಂದ ತೇಲ್‌ತುಂಬ್ಡೆ  ಸೇರಿದಂತೆ ಅನೇಕರು  ಪಾಲ್ಗೊಳ್ಳಲಿದ್ದಾರೆ ಎಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೇದಿಕೆಯ ಕಾರ್ಯ ವಿವಿಧ ಕೋಮುಗಳ ನಡುವೆ ಸೌಹಾರ್ದ ಮೂಡಿಸುವುದು. ಹೀಗಾಗಿ ಹತ್ತಾರು ಸಂಘಟನೆಗಳು ಈ ವೇದಿಕೆಯೊಂದಿಗೆ ಗುರುತಿಸಿಕೊಂಡಿವೆ. ಧರ್ಮದ ಹೆಸರಲ್ಲಿ ಯಾರಾದರೂ ಸಮಾಜ ವಿದ್ರೋಹಿ ಕೆಲಸ ಮಾಡಿದ್ದರೆ ವೇದಿಕೆ ಅದನ್ನು ಬಲವಾಗಿ ಖಂಡಿಸುತ್ತದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಹೀಗಾಗಿ ಕೋಮು ಸೌಹಾರ್ದ ವೇದಿಕೆಯು ಹಿಂದೂ ವಿರೋಧಿ ಸಂಘಟನೆ ಎಂದು ಬಿಂಬಿಸುವುದು ತಪ್ಪು ಎಂದು ಸ್ಪಷ್ಟಪಡಿಸಿದರು.

ಐಕ್ಯತಾ ಸಮಾವೇಶದ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಸುರೇಶ್ ಭಟ್ ಬಾಕ್ರಬೈಲ್, ಸಿ.ಎನ್.ಶೆಟ್ಟಿ, ನಿರ್ಮಲ್ ಕುಮಾರ್, ವಾಸುದೇವ ಬೋಳೂರು, ಮೊಹಮ್ಮದ್ ಕಕ್ಕಿಂಜೆ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.