ADVERTISEMENT

ಕೋಲಾರ: ವಿದ್ಯಾರ್ಥಿಗಳ ಧರಣಿ ಶುರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಕೋಲಾರ: ತಾಲ್ಲೂಕಿನ ಮಂಗಸಂದ್ರದಲ್ಲಿ ಸ್ಥಗಿತಗೊಂಡಿರುವ ಸ್ನಾತಕೋತ್ತರ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ನಗರದ ಬಾಲಕರ ಸರ್ಕಾರಿ ಕಾಲೇಜು ಆವರಣದಲ್ಲಿರುವ ಸ್ನಾತಕೋತ್ತರ ಕೇಂದ್ರದ ಮುಂದೆ ಶನಿವಾರ ವಿದ್ಯಾರ್ಥಿಗಳು ಅನಿರ್ದಿಷ್ಟ ಧರಣಿ ಆರಂಭಿಸಿದರು.

ಕಾಮಗಾರಿ ಸ್ಥಗಿತಗೊಂಡು ಮೂರ‌್ನಾಲ್ಕು ತಿಂಗಳಾದರೂ ವಿಶ್ವವಿದ್ಯಾಲಯ ಗಂಭೀರ ಗಮನ ಹರಿಸಿಲ್ಲ. ಆ. 15ರ ಹೊತ್ತಿಗೆ ಕೇಂದ್ರವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಕುಲಪತಿಗಳು ನೀಡಿದ ಭರವಸೆ ಈಡೇರಿಲ್ಲ. ಹೀಗಾಗಿ ಕಾಮಗಾರಿ ಶುರುವಾಗುವವರೆಗೂ ತರಗತಿಗಳಿಗೆ ಹಾಜರಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧರಣಿ ನಿಲ್ಲಿಸಲು ಮನವಿ ಮಾಡಿದ ಕೇಂದ್ರದ ನಿರ್ದೇಶಕ ಸಿ.ನಾಗಭೂಷಣ ಅವರೊಂದಿಗೆ ಮಾತನಾಡಿದ ವಿದ್ಯಾರ್ಥಿ ಮುಖಂಡರು, ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆತರುವವರೆಗೂ ನಮ್ಮಡನೆ ಮಾತನಾಡಬೇಡಿ. ಕೇಂದ್ರಕ್ಕೂ ಬರಬೇಡಿ ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ನಿರ್ದೇಶಕರು ಕೇಂದ್ರದ ಎಲ್ಲ ಬೋಧಕ ಸಿಬ್ಬಂದಿಯೊಡನೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಘಟನೆಯೂ ನಡೆಯಿತು.

ಸೋಮವಾರ ಮತ್ತೆ ಧರಣಿ ನಡೆಯಲಿದೆ. ವಿಶ್ವವಿದ್ಯಾಲಯದ ಪ್ರತಿಕ್ರಿಯೆಯನ್ನು ಆಧರಿಸಿ ಧರಣಿ ಮುಂದುವರಿಸುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಮುಖಂಡರಾದ ಬಿ.ಸುರೇಶ್‌ಗೌಡ, ಶಂಕರ್, ಪ್ರದೀಪ್, ದೇವರಾಜ್, ಶ್ರೀನಿವಾಸ್, ಅಂಬರೀಶ್, ಮಮತಾ, ಆಶಾ, ಸರಳಾ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.