ADVERTISEMENT

ಕ್ರೀಡಾಪಟುವಿಗೆ ಆರ್ಥಿಕ ನೆರವು ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಭದ್ರಾವತಿ: `ಕ್ರೀಡಾಪಟುವಿಗೆ ಆರ್ಥಿಕ ನೆರವು, ಪ್ರೋತ್ಸಾಹ ದೊರೆತಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ~ ಎಂದು ಅಂತರರಾಷ್ಟ್ರೀಯ ಪವರ್‌ಲಿಫ್ಟರ್ ವಿ. ನೇತ್ರಾವತಿ ಹೇಳಿದರು.

ನಗರಸಭೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರೋತ್ಸಾಹ, ಸಹಕಾರ ದೊರೆಯದಿದ್ದಲ್ಲಿ ಯಾರೂ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರ ಬೆಂಬಲ ಸಿಕ್ಕಿದರೆ ಮತ್ತಷ್ಟು ಸಾಧನೆ ಸಾಧ್ಯ ಎಂದರು.

ವೇಟ್‌ಲಿಫ್ಟರ್ ಸಿ.ಆರ್.ಪಿ. ಸುಧೀರ್‌ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಮಗೆ ಹೆಚ್ಚಿನ ಸಹಕಾರ ದೊರೆಯುತ್ತಿದೆ. ಇದು ಮತ್ತಷ್ಟು ವೃದ್ಧಿಸಿದಲ್ಲಿ ಇನ್ನಷ್ಟು ಸಾಧನೆ ಮಾಡುವ ಮೂಲಕ ಊರಿನ ಗೌರವ ಹೆಚ್ಚಿಸುತ್ತೇವೆ ಎಂದರು.

ಹಿರಿಯರ ಕ್ರೀಡೆಯಲ್ಲಿ ಪ್ರಶಸ್ತಿ ಪಡೆದಿರುವ ರಾಮೇಗೌಡ ಮಾತನಾಡಿ, ಶ್ರಮ, ನಿಷ್ಠೆ, ಸಾಧನೆ ಮಾಡುವ ಮನಸ್ಸು ಇದ್ದರೆ ಎಲ್ಲವನ್ನೂ ಸಾಧಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್, ಈ ಕ್ರೀಡಾಪಟುಗಳು ಊರಿನ ಹೆಸರನ್ನು ಅಂತರರಾಷ್ಟ್ರೀಯಮಟ್ಟದಲ್ಲಿ ಎತ್ತಿ ಹಿಡಿದಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯ, ಅಂತರರಾಷ್ಟ್ರೀಯ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉಚಿತವಾಗಿ ನಿವೇಶನ ಕೊಡುವ ನಿರ್ಣಯ ಮಾಡಲಾಗುವುದು ಎಂದು ಘೋಷಿಸಿದರು.
 
ವೇದಿಕೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ಮೆಹಬೂಬ್‌ಸಾಬ್, ವಿ. ಕದಿರೇಶ್, ಮಾಜಿ ಅಧ್ಯಕ್ಷರಾದ ವೈ. ರೇಣುಕಮ್ಮ, ಆರ್. ಕರುಣಾಮೂರ್ತಿ, ಸ್ಥಾಯಿಸಮಿತಿ ಅಧ್ಯಕ್ಷ ಆರ್. ವೇಣುಗೋಪಾಲ್, ಜಿ.ಪಂ. ಸದಸ್ಯ ಎಚ್.ಎಲ್. ಷಡಾಕ್ಷರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.