ADVERTISEMENT

ಗಣೇಶೋತ್ಸವ: ಖರೀದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 19:30 IST
Last Updated 31 ಆಗಸ್ಟ್ 2011, 19:30 IST
ಗಣೇಶೋತ್ಸವ: ಖರೀದಿ ಸಂಭ್ರಮ
ಗಣೇಶೋತ್ಸವ: ಖರೀದಿ ಸಂಭ್ರಮ   

ಬಳ್ಳಾರಿ: ಹೂ, ಹಣ್ಣು, ಮಾವಿನ ತಳಿರು, ತೋರಣ. ಬಾಳೆ ಕಂಬ, ಕಬ್ಬಿನ ಜಲ್ಲೆ, ತೆಂಗಿನ ಕಾಯಿ, ಪಟಾಕಿ, ಹಾಗೂ ಇವೆಲ್ಲವುಗಳನ್ನು ಕೊಂಡುಕೊಳ್ಳಲು  ಕಾರಣನಾಗಿರುವ ಗಣೇಶನ ಮೂರ್ತಿಯ ದರ ಗಗನಕ್ಕೆ ಏರಿದ್ದರೂ ಜನತೆ ನಗರದ ಮಾರುಕಟ್ಟೆಯಲ್ಲಿ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದರು.

ಗಣೇಶ ಚತುರ್ಥಿ ಅಂಗವಾಗಿ ಗುರುವಾರ ಪ್ರತಿಷ್ಠಾಪನೆ ಆಗಲಿರುವ ಏಕದಂತನ ಪೂಜೆಗೆ, ಅಲಂಕಾರಕ್ಕೆ ಅಗತ್ಯವಾಗಿರುವ ಈ ಎಲ್ಲ ವಸ್ತುಗಳನ್ನು ಕೊಂಡುಕೊಳ್ಳಲು ಬುಧವಾರವಿಡೀ ಜನತೆ ಮುಗಿಬಿದ್ದಿದ್ದು ವಿಶೇಷವಾಗಿತ್ತು.

ಪ್ರತಿ ವಸ್ತುವಿನ ಬೆಲೆ ಗಗನಮುಖಿ ಆಗಿದ್ದರೂ ಚೌಕಾಸಿ ಮಾಡುತ್ತಲೇ ಎಲ್ಲವುಗಳನ್ನೂ ಖರೀದಿಸಲು ದುಂಬಾಲು ಬಿದ್ದ್ದ್ದಿದ ನಗರ ನಿವಾಸಿಗಳು, ಸುತ್ತಮುತ್ತಲ ಗ್ರಾಮಸ್ಥರು, ಕನಕ ದುರ್ಗಮ್ಮ ದೇವಸ್ಥಾನದ ಪಕ್ಕದಲ್ಲಿರುವ ವಿಶಾಲ, ತಾತ್ಕಾಲಿಕ ಮಾರುಕಟ್ಟೆಯಲ್ಲಿ ಬಿರುಸಾಗಿ ಓಡಾಡುತ್ತಿದ್ದುದು ಕಂಡುಬಂತು.

ಒಂದು ಮೊಳ ಮಲ್ಲಿಗೆಗೆ ರೂ 10, ಸೇವಂತಿಗೆ ಹೂವಿನ ಒಂದು ಮಾಲೆಗೆ ರೂ 25 ನಿಗದಿಯಾಗಿದ್ದರೂ ಖರೀದಿಸುವವರ ಉತ್ಸಾಹ ಕಡಿಮೆಯಾಗಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಉತ್ಸವಕ್ಕೆ ಗಣೇಶನ ಮೂರ್ತಿಯ ಬೆಲೆಯೂ ಹೆಚ್ಚಿದ್ದು, ಮನೆಗಳಲ್ಲಿ ಪ್ರತಿಷ್ಠಾಪನೆ ಆಗಲಿರುವ ಚಿಕ್ಕ ಮೂರ್ತಿಗೆ ಕನಿಷ್ಠ ರೂ 100ರಿಂದ ದರ ಆರಂಭವಾದರೆ, ಸಾರ್ವಜನಿಕವಾಗಿ ಇರಿಸಲಾಗುವ ಬೃಹತ್ ಮೂರ್ತಿಗೆ ಗರಿಷ್ಠ ರೂ 60 ಸಾವಿರದವರೆಗೆ ದರ ಇದೆ.

ಅನೇಕ ಭಕ್ತರು ಹಬ್ಬಕ್ಕೆ ಒಂದು ದಿನ ಮೂಂಚಿತವಾಗಿಯೇ ಗಣೇಶನ ಮೂರ್ತಿ, ಪೂಜೆಗೆ, ನೈವೇದ್ಯಕ್ಕೆ, ಅಲಂಕಾರಕ್ಕೆ ಬೇಕಾದ ಸಾಮಗ್ರಿಯನ್ನು ಖರೀದಿಸಿ ಮನೆಗಳಿಗೆ ಕೊಂಡೊಯ್ದರೆ, ಸಾಮೂಹಿಕವಾಗಿ ತಂಡಗಳಲ್ಲಿ ಆಗಮಿಸಿದ ಕೆಲವರು ಬೃಹದಾಕಾರದ ಗಣಪನನ್ನು ವಾಹನಗಳಲ್ಲಿ ಇರಿಸಿಕೊಂಡು ಸಂಭ್ರಮದಿಂದಲೇ ತೆರಳಿದರು.

ನಗರದ ಬೆಂಗಳೂರು ರಸ್ತೆಯಲ್ಲಿನ ಹೂ, ಹಣ್ಣಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಯಲ್ಲೂ ಸಾಕಷ್ಟು ಜನಸಂದಣಿ ಕಂಡುಬಂತಲ್ಲದೆ, ಹಣ್ಣಿನದ ದರವೂ  ಗಗನಕ್ಕೇರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.