ADVERTISEMENT

ಗಾಂಧಿ ಶಿಲ್ಪಾ ಬಜಾರ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಮಂಗಳೂರು: ಕೇಂದ್ರ ಸರ್ಕಾರದ ಜವಳಿ ಸಚಿವಾಲಯ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಗಾಂಧಿ ಶಿಲ್ಪಾ ಬಜಾರ್ ನಗರದ ಹೋಟೆಲ್ ವುಡ್‌ಲ್ಯಾಂಡ್ಸ್‌ನಲ್ಲಿ ಶುಕ್ರವಾರ ಆರಂಭಗೊಂಡಿದ್ದು, 15ರ ವರೆಗೆ ಮುಂದುವರಿಯಲಿದೆ.

ರಾಷ್ಟ್ರದ ವಿವಿಧೆಡೆಯ 150 ಕರಕುಶಲಕರ್ಮಿಗಳು ತಾವು ಸೃಷ್ಟಿಸಿದ ಕಲಾಕೃತಿಗಳನ್ನು ಶಿಲ್ಪ ಬಜಾರಿನಲ್ಲಿ ಪ್ರದರ್ಶಿಸಿ ಮಾರಾಟ ಮಾಡುವರು. ಭಾನುವಾರವೂ ಸೇರಿದಂತೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8.30ರ ವರೆಗೆ ತೆರೆದಿರುತ್ತದೆ.

ರಂಗು ರಂಗಿನ ಮತ್ತು ಮಿಂಚಿನ ಎರಕ ಹೊಯ್ದು ಮಾಡಿದ ಧೋಕ್ರಾ ಕಲಾಕೃತಿಗಳು, ಶಿಲ್ಪಕಲೆಗಳು, ತಾಳೆಗರಿಯ ಮೇಲೆ ಕೆತ್ತಿದ ಒರಿಸ್ಸಾ ಕಲಾಕೃತಿಗಳು, ಜಮಖಾನೆಗಳು, ಗಿರಿಜನರ ಆಭರಣಗಳು, ಬಿಹಾರದ ಅರಗು ಲೇಪಿತ ಕಲಾಕೃತಿಗಳು, ಉಣ್ಣೆಯ ಜಮಖಾನೆಗಳು, ಪಶ್ಚಿಮ ಬಂಗಾಳದ ಸೆಣಬಿನ ಕಲಾಕೃತಿಗಳು, ಈಶಾನ್ಯ ಭಾರತದ ಕುಂಬಾರಿಕಾ ಕಲಾಕೃತಿಗಳು, ರಾಜಸ್ತಾನದ ಸೂಕ್ಷ್ಮಾಕಾರದ ವರ್ಣನಿರ್ಮಿತ ಚಿತ್ರಕಲೆ ಹಾಗೂ ಪೇಪರ್ ಮೆಶ್ ಕಲಾಕೃತಿಗಳು ಶಿಲ್ಪಾ ಬಜಾರಿನಲ್ಲಿ ಕಂಗೊಳಿಸುತ್ತಿವೆ.

ಜಮ್ಮು ಮತ್ತು ಕಾಶ್ಮೀರದ ಉಣ್ಣೆಯ ಶಾಲುಗಳು, ಆಂಧ್ರ ಪ್ರದೇಶದ ಮುತ್ತಿನ ಆಭರಣಗಳು ಹಾಗೂ ಕಸೂತಿಯ ಜರತಾರಿ ಕಲಾಕೃತಿಗಳು, ರಾಜ್ಯದ ಶ್ರೀಗಂಧ ಹಾಗೂ ಇತರ ಮರಗಳಿಂದ ಕೆತ್ತಿದ ಕಲಾಕೃತಿಗಳು, ಕೇರಳದ ಚೋಳರ ಕಾಲವನ್ನು ಬಿಂಬಿಸುವ ಕಂಚಿನ ವಿಗ್ರಹಗಳು, ಶಿಲ್ಪಕಲೆಗಳು, ಶ್ರೀಗಂಧದ ಕಲಾಕೃತಿಗಳು, ನಾರಿನಿಂದ ತಯಾರಿಸಿದ ಕಲಾಕೃತಿಗಳು, ಚಂದೇರಿ ಸೀರೆಗಳು, ಫುಲ್ ಕಾರಿ ಹಾಗೂ ಮಧು ಬನಿ ಚಿತ್ರಕಲೆಗಳು ಇವೆ.
ಸಂಸದ ನಳಿನ್ ಕುಮಾರ್ ಕಟೀಲ್  ಶಿಲ್ಪ ಬಜಾರಿಗೆ ಶುಕ್ರವಾರ ಚಾಲನೆ ನೀಡಿದರು. ರಾಜ್ಯ ಕರಕುಶಲ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಪರಮೇಶ್ವರ್, ಕೇಂದ್ರದ ಪ್ರತಿನಿಧಿ ಪ್ರಭಾಕರ್, ಸಲಾವುದ್ದೀನ್ ಮತ್ತಿತರರು ಇದ್ದರು.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT