ADVERTISEMENT

ಗ್ರಾಮೀಣ ಪರಂಪರೆ ರಕ್ಷಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ಮಾಗಡಿ: ದೇವಾಲಯಗಳು ಗ್ರಾಮೀಣ ಜನರ ಮನಸ್ಸನ್ನು ಶಾಂತವಾಗಿರಿಸಿ, ಜೀವನದ ಕೊನೆಯಲ್ಲಿ ಮುಕ್ತಿಯ ಮಾರ್ಗದತ್ತ ಕೊಂಡೊಯ್ಯುವ ಕ್ಷೇತ್ರಗಳಾಗಿವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಹುಟ್ಟೂರು ಹುಲೀಕಟ್ಟೆಯಲ್ಲಿದ್ದ ಪುರಾಣ ಪ್ರಸಿದ್ಧ ಈಶ್ವರಸ್ವಾಮಿ ಮತ್ತು ಮಾರಮ್ಮದೇವಿಯ ದೇವಾಲಯಗಳನ್ನು ಜೀರ್ಣೋದ್ದಾರಗೊಳಿಸಿ ಸ್ಥಿರಬಿಂಬ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.

ಊರಿಗೊಂದು ದೇವಾಲಯ, ಕೆರೆ, ಗುಂಡು ತೋಪು, ಅರಳೀಕಟ್ಟೆ ಕಟ್ಟಿ ನಾಗರ ಪ್ರತಿಷ್ಠಾಪಿಸುತ್ತಿದ್ದ ನಮ್ಮ ಪೂರ್ವಿಕರ ಪರಂಪರೆಯನ್ನು ಮರೆಯದೆ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಹಿರಿಯ ಕಲಾವಿದ ನಾರಾಯಣಸ್ವಾಮಿ ಮಾತನಾಡಿ, ಸತ್ಯ, ನ್ಯಾಯ, ನೀತಿಯಿಂದ ನಡೆಯುವವರಿಗೆ ಮಾತ್ರ ಜೀವನದಲ್ಲಿ ಕಷ್ಟಗಳು ಎದುರಾಗುವುದಿಲ್ಲ ಎಂದರು. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಮಾತನಾಡಿ, ದೇವರ ಪ್ರಾರ್ಥನೆಯೊಂದಿಗೆ ನಮ್ಮ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡೋಣ.ಜನಸೇವೆಯೇ ಜನಾರ್ದನನ ಸೇವೆ ಎಂದು ವಿವರಿಸಿದರು.

ಬೆಟ್ಟಹಳ್ಳಿ ಮಠಾಧೀಶರಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಧರ್ಮ ಸಂದೇಶವನ್ನು ನೀಡಿದರು. ಶಾಸಕರ ಪತ್ನಿ ರಾಧಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಜಿ.ರಾಮಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುದ್ದುರಾಜಯಾದವ್, ಎಂ.ಕೆ.ಧನಂಜಯ್ಯ, ವಿಜಯ್‌ಕುಮಾರ್, ಹಂಸಕುಮಾರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕಾಂತರಾಜು,  ಜಿ.ಕೃಷ್ಣ, ಅರುಂಧತಿ ಚಿಕ್ಕಣ್ಣ, ಮಾಜಿ ಸದಸ್ಯರಾದ ಪುಷ್ಪಾವತಿ ಶಿವಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.