
ಗುಲ್ಬರ್ಗ: ಮನೆಯ ಮುಂದಿನ ತೆರೆದ ಚರಂಡಿಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ಇಲ್ಲಿನ 49 ನೇ ವಾರ್ಡ್‌ನ ಇಂದಿರಾನಗರದಲ್ಲಿ ನಡೆದಿದೆ.
ನಾಲ್ಕು ವರ್ಷದ ಅಭಿಷೇಕ ಮೃತಪಟ್ಟ ಬಾಲಕ. ಇಲ್ಲಿನ ಸಂತೋಷ ಬೈರಾಮಡಗಿ ಮತ್ತು ಮಲ್ಲಮ್ಮ ದಂಪತಿಯ ಪುತ್ರ. ಎಂದಿನಂತೆ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿದ್ದ. ಸ್ಪಲ್ಪ ಹೊತ್ತಿನಲ್ಲಿ ಮನೆಯ ಮುಂದಿನ ತೆರೆದ ಚರಂಡಿ ನೀರಿನಲ್ಲೇ ಶವ ಪತ್ತೆಯಾಗಿದೆ. ಆಟವಾಡುತ್ತಿದ್ದಾಗ ಚರಂಡಿಗೆ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ.
`ಸ್ಥಳಕ್ಕೆ ಪಾಲಿಕೆಯ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ.
ಅವರು ವರದಿ ನೀಡಿದ ತಕ್ಷಣ ಪರಿಹಾರ ನೀಡಲಾಗುವುದು. ಚರಂಡಿ ತೆರೆದಿರಲು ಕಾರಣವನ್ನು ಪತ್ತೆ ಹಚ್ಚಿ, ಕಾಮಗಾರಿ ನಡೆಸಿದ ಸಂಸ್ಥೆ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದು ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಪಾಲಿಕೆಯ ಆಯುಕ್ತ ಸಿ. ನಾಗಯ್ಯ `ಪ್ರಜಾವಾಣಿ~ಗೆ ತಿಳಿಸಿದರು.
ಮಾಜಿ ಮೇಯರ್ ಸುನಂದಾ ರಾಜಾರಾಮ್ ಈ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಸೋಮಶೇಖರ ಮೇಲಿನಮನಿ ತಿಳಿಸಿದರು.
ಸುಮಾರು 5 ಅಡಿಗೂ ಆಳದ ಈ ಪ್ರಮುಖ ಚರಂಡಿಯು ಹಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲೇ ಇದೆ. ಈ ತನಕ ಹಲವು ಮಕ್ಕಳು ಮತ್ತು ದೊಡ್ಡವರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಚರಂಡಿಯ ಕಸವನ್ನು ತೆಗೆದು ಪಕ್ಕದಲ್ಲೇ ಹಾಕುತ್ತಾರೆ. ಸೂಕ್ತ ವಿಲೇವಾರಿ ಮಾಡುವುದಿಲ್ಲ. ಹೀಗಾಗಿ ಜಾರಿ ಬೀಳುತ್ತಾರೆ. ಸ್ಥಳೀಯ ಕೆಲವು ಶೌಚಾಲಯಗಳ ಸಂಪರ್ಕವನ್ನೂ ಇದಕ್ಕೆ ಕೊಟ್ಟಿದ್ದಾರೆ. ಈ ತನಕ ಚಪ್ಪಡಿಯನ್ನೂ ಮುಚ್ಚಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.