ADVERTISEMENT

ಚರಿತ್ರೆಯ ದಾಖಲೆ ಸಂರಕ್ಷಣೆ ಅತ್ಯಗತ್ಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 8:44 IST
Last Updated 29 ಮಾರ್ಚ್ 2018, 8:44 IST

ಚಿಂತಾಮಣಿ: ಕರ್ನಾಟಕ ಚರಿತ್ರೆಯ ದಾಖಲೆಗಳನ್ನು ರಾಜ್ಯ ಪತ್ರಾಗಾರ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಂರಕ್ಷಣೆ ಮಾಡಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ. ಅನಂತರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗವು ರಾಜ್ಯ ಪತ್ರಾಗಾರ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕರ್ನಾಟಕ ಇತಿಹಾಸ ಕಾಗ್ರೆಸ್‌ನ 27ನೇ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕ ಚರಿತ್ರೆಯ ದಾಖಲೆಗಳನ್ನು ರಾಜ್ಯ ಪತ್ರಾಗಾರ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಂರಕ್ಷಣೆ ಮಾಡಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ. ಅನಂತರಾಮಯ್ಯ ಅಭಿಪ್ರಾಯಪಟ್ಟರು.

ADVERTISEMENT

ಇತಿಹಾಸ ಪ್ರಾಧ್ಯಾಪಕರು ಹೆಚ್ಚು ಕ್ರಿಯಾಶೀಲರಾಗಿ ಸ್ಥಳೀಯ ಸ್ಮಾರಕಗಳನ್ನು ರಕ್ಷಣೆ ಮಾಡಲು ಶ್ರಮಿಸಬೇಕಾಗಿದೆ. ಪರಂಪರೆಯನ್ನು ಮತ್ತು ಇತಿಹಾಸವನ್ನು ಮರೆತರೆ ಮುಂದಿನ ಬದುಕು ಕತ್ತಲೆಯಾಗುತ್ತದೆ. ಕರ್ನಾಟಕದ ಚರಿತ್ರೆಯನ್ನು ಸಮಗ್ರವಾಗಿ ರಚಿಸಬೇಕಾಗಿದೆ ಎಂದರು.

ಜಿಲ್ಲಾ ಭೂದಾಖಲೆಗಳು ಮತ್ತು ಭೂ ಮಾಪನ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಮಾತನಾಡಿ, ಜನಸಾಮಾನ್ಯರ ಚರಿತ್ರೆಯನ್ನು ಕಟ್ಟಬೇಕಾಗಿದೆ. ಸ್ಥಳೀಯ ಚರಿತ್ರೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳ ಅಗತ್ಯವಿದೆ. ಉನ್ನತ ಶಿಕ್ಷಣವು ಹೆಚ್ಚು ಜನರಿಗೆ ನೀಡಲು ರಾಜಕೀಯ ನಾಯಕರು, ಶಿಕ್ಷಣ ತಜ್ಞರು ಹಾಗೂ ಆಡಳಿತವರ್ಗ ಆಸಕ್ತಿ ತೋರಬೇಕಾಗಿದೆ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಭೂ ಮಾಪನ ಇಲಾಖೆಯು ಗ್ರಾಮ ನಕ್ಷೆಗಳನ್ನು ಮತ್ತು ಭೂಪಟಗಳನ್ನು ರಕ್ಷಣೆ ಮಾಡಿ ಚರಿತ್ರೆ ರಚನೆ ಮಾಡುವವರಿಗೆ ಅನುಕೂಲ ಮಾಡಿಕೊಟ್ಟಿದೆ. ನಕ್ಷೆ ಇಲ್ಲದಿದ್ದರೆ ರಾಜ್ಯದ ತಾಲ್ಲೂಕುಗಳ ಮತ್ತು ಗ್ರಾಮಗಳ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಪ್ರಾಂಶುಪಾಲ ಪ್ರೊ.ವಿ.ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌.ರಘು ಹಾಗೂ ಪ್ರಾಂಶುಪಾಲ ಪ್ರೊ.ವಿ.ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಇತಿಹಾಸ ತಜ್ಞರಾದ ಪ್ರೊ. ರು.ಮ. ಷಡಕ್ಷರಯ್ಯ, ಪ್ರೊ.ಬಿ.ಸಿ. ಮಹಾಬಲೇಶ್ವರಪ್ಪ, ಪ್ರೊ.ಎ.ಕೆ. ಶಾಸ್ತ್ರೀ, ಪ್ರೊ.ಐ.ಕೆ.ಪತ್ತಾರ್‌, ಪ್ರೊ.ಎನ್‌.ಶೇಖ್‌ಮಸ್ತಾನ್‌. ಪ್ರೊ.ಮುನಿರಾಜಪ್ಪ, ಪ್ರಾಂಶುಪಾಲೆ ಪ್ರೊ.ಕೆ.ಶಾರದಾ, ಪ್ರೊ.ಆರ್‌.ಶ್ರೀದೇವಿ, ಪ್ರೊ.ಜಿ.ಎನ್‌.ವೆಂಕಟಾಚಲಪತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.