ADVERTISEMENT

ಚಿಂಚಲಿ: ಸಂಭ್ರಮದ ಮಾಯಕ್ಕಾ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ರಾಯಬಾಗ: ಉತ್ತರಕರ್ನಾಟಕದ ಹಾಗೂ ದಕ್ಷಿಣ ಮಹಾರಾಷ್ಟ್ರದ ಪ್ರಸಿದ್ಧ ಪ್ರಭಾವಿ ಶಕ್ತಿದೇವತೆಯಾದ ತಾಲ್ಲೂಕಿನ ಚಿಂಚಲಿಯ ಮಾಯಕ್ಕಾ ದೇವಿಗೆ ಶನಿವಾರ ನೈವೇದ್ಯ ಅರ್ಪಿಸುವ ಮೂಲಕ  ಜಾತ್ರೆಯು ವಿಜೃಂಭಣೆಯಿಂದ ಜರುಗಿತು.

ರಾಜ್ಯದ ಹಾಗೂ ನೆರೆ ರಾಜ್ಯಗಳ ವಿವಿಧ ಭಾಗಗಳಿಂದ ಚಕ್ಕಡಿ, ಮೋಟರು ವಾಹನಗಳಲ್ಲಿ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರ `ಚಾಂಗಭಲ~ `ಹೋಭಲ~ ಎಂಬ ಉದ್ಘೋಷ ದೇವಸ್ಥಾನದ ತುಂಬೆಲ್ಲಾ ಪ್ರತಿಧ್ವನಿಸುತ್ತಿತ್ತು.
ಹಾಲಹಳ್ಳದಲ್ಲಿ ಪವಿತ್ರ ಸ್ನಾನ ಮಾಡಿ ದೇವಿಯ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದುದು ಸಾಮಾನ್ಯವಾಗಿತ್ತು. ದೇವಿಗೆ ಹಣ್ಣು, ಕಾಯಿ, ಕರ್ಪೂರ ಸಮರ್ಪಿಸಿ ಅವರು ತಮ್ಮ ಹರಕೆ ತೀರಿಸಿಕೊಂಡರು. ಕೆಲವರು ನೋಟಿನ ಹಾರದ ಮೂಲಕ ಹರಕೆ ತೀರಿಸಿದರು.

ಕೊಂಕಣದ ಭಕ್ತರು ಸ್ಥಳದಲ್ಲಿಯೇ ಕಡಬು, ಹೋಳಿಗೆ  ಅನ್ನ ಇನ್ನುಳಿದ ಪಂಚಾನ್ನಗಳನ್ನು ಭಕ್ತಿಭಾವದಿಂದ ತಯಾರಿಸುವ ದೃಶ್ಯ ಸಾಮಾನ್ಯ ವಾಗಿತ್ತು. ದೇವಸ್ಥಾನದ ಸುತ್ತೆಲ್ಲಾ ಜನಸಂದಣಿಯಿಂದಾಗಿ ಎಲ್ಲವೂ ಭಂಡಾರದಿಂದ ಹಳದಿಮಯವಾಗಿತ್ತು.

ಕೃಷಿಯಲ್ಲಿ ಆಧುನಿಕ ಯಂತ್ರಗಳ ಭರಾಟೆಯಿಂದಾಗಿ ಜಾನುವಾರಗಳ ಸಂಖ್ಯೆ ಕಡಿ ಮೆಯಾಗುತ್ತಿದ್ದರೂ ಚಿಂಚಲಿ ಜಾತ್ರೆಯಲ್ಲಿ ಮಾತ್ರ ಜಾನುವಾರು ಜಾತ್ರೆಗೆ ದನಗಳ ಕೊರತೆ ಇರಲಿಲ್ಲ. ಜಾತ್ರೆಯಲ್ಲಿ ರೈತರು ತಮ್ಮ ರಾಸುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅತೀವ ಶ್ರಮ ವಹಿಸುತ್ತಾರೆ.
 
ಬಣ್ಣದ ಬಟ್ಟೆಗಳಿಂದ ಶೃಂಗರಿಸಿದ  ಹೋರಿಗಳನ್ನು ಪೆಂಡಾಲ್‌ಗಳಲ್ಲಿ ಪ್ರದರ್ಶಿಸುವುದು ಇಲ್ಲಿ ಸಾಮಾನ್ಯ. ಕೆಲ ರೈತರು ಶೃಂಗರಿಸಿದ ತಮ್ಮ ರಾಸುಗಳನ್ನು ಮಂಗಳವಾದ್ಯಗಳೊಂದಿಗೆ ದೇವಸ್ಥಾನದವರೆಗೆ ತಂದು ಪೂಜೆ ಸಲ್ಲಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.