ADVERTISEMENT

ಚಿತ್ರದುರ್ಗ ಜಿಲ್ಲಾ ಮಟ್ಟದ ಖಾದಿ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಚಿತ್ರದುರ್ಗ: ಜಿಲ್ಲಾ ಮಟ್ಟ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ `ಖಾದಿ ಮೇಳ 2011-12~ಕ್ಕೆ ಗುರುವಾರ ನಗರದ ಗುರುಭವನದಲ್ಲಿ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತು ವಾಣಿಜ್ಯ ಇಲಾಖೆ, ನಬಾರ್ಡ್ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಖಾದಿ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಆನಂದ ವಸಂತ ಅಸ್ನೋಟಿಕರ್ ಉದ್ಘಾಟಿಸಿದರು. ಜನವರಿ 26ರಿಂದ 10 ದಿನಗಳ ಕಾಲ ಮೇಳ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಭಿವೃದ್ಧಿ ಅಧಿಕಾರಿ ಕೆ.ವಿ. ಚಕ್ರಪಾಣಿ, ದೇಶದಲ್ಲಿ 7 ಲಕ್ಷ ಜನ ಖಾದಿ ಉದ್ಯಮದಲ್ಲಿ ತೊಡಗಿದ್ದಾರೆ. ರಾಜ್ಯದ ಖಾದಿ ಕ್ಷೇತ್ರದಲ್ಲಿ 31 ಸಾವಿರ ಮಂದಿ ದುಡಿಯುತ್ತಿದ್ದಾರೆ. ಇದರಲ್ಲಿ 21 ಸಾವಿರ ಮಹಿಳೆಯರಿದ್ದಾರೆ. ಉತ್ಪಾದಕರಿಂದ ನೇರ ಗ್ರಾಹಕರಿಗೆ ಖಾದಿ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ.
 
ಮೇಳದಲ್ಲಿ ವಿಶೇಷ ರಿಯಾಯ್ತಿ ನೀಡಲಾಗಿದೆ. ರೇಷ್ಮೆ ಬಟ್ಟೆಗಳಿಗೆ ಶೇ 15  ಹಾಗೂ ಉಳಿದ ಬಟ್ಟೆಗಳಿಗೆ ಶೇ 35ರಷ್ಟು ರಿಯಾಯ್ತಿ ಇದೆ. ರಿಯಾಯ್ತಿ ಹಣವನ್ನು ರಾಜ್ಯ ಸರ್ಕಾರ ಶೇ 15 ಮತ್ತು ಕೇಂದ್ರ ಶೇ 20ರಷ್ಟು ಭರಿಸಲಿದೆ ಎಂದರು.

ಇಲ್ಲಿ ನಡೆಯುವ ವಹಿವಾಟಿನಿಂದ ಉಂಟಾಗುವ ಲಾಭ ನೇರವಾಗಿ ಕಸುಬುದಾರರಿಗೆ ತಲುಪುತ್ತದೆ. ಆದ್ದರಿಂದ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ಬಟ್ಟೆಗಳು ಮತ್ತು ವಸ್ತುಗಳನ್ನು ಖರೀದಿಸಿ ಸ್ವದೇಶಿ ವಸ್ತುಗಳಿಗೆ ಪ್ರೋತ್ಸಾಹಿಸಬೇಕು ಎಂದು ಕೋರಿದರು. ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ
ಯು.ಎ.  ನಾಗಪ್ಪ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.