ADVERTISEMENT

ಚೆಸ್ ಆಟವು ದೈಹಿಕ ಬೋಧನಾ ವಿಷಯವಾಗಲಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಶಿವಮೊಗ್ಗ: ಚೆಸ್ ಆಟವನ್ನು ಸಹ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಬೋಧನಾ ವಿಷಯವನ್ನಾಗಿ ಮಾಡಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಎಸ್.ಎ.ಬಾರಿ ಸಲಹೆ ನೀಡಿದರು.

 ನಗರದ ಗಾಂಧಿಪಾರ್ಕ್‌ನ ರೋವರ್ಸ್‌ ಕ್ಲಬ್‌ನಲ್ಲಿ  ಶನಿವಾರ ಜಿಲ್ಲಾ ಚೆಸ್ ಅಸೋಸಿಯೇಷನ್ ಹಾಗೂ ರೋವರ್ಸ್‌ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ರೋವರ್ಸ್‌ ಕಪ್-2012 ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧಿವಂತರ ಆಟವೆಂದೇ ಹೆಸರಾದ ಚೆಸ್ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚಿಸುವಲ್ಲಿ ಸಂಪೂರ್ಣ ಸಹಕಾರಿಯಾಗಿದೆ. ಆದ್ದರಿಂದ ಚೆಸ್ ಆಟವನ್ನು ಶಾಲೆಗಳಲ್ಲಿ ಬೋಧನಾ ವಿಷಯವನ್ನಾಗಿ ಕಲಿಯುವುದು ಒಳ್ಳೆಯದು. ಚೆಸ್ ಇಂದು ವಿಶ್ವಮಟ್ಟದ ಆಟವಾಗಿದ್ದು, ಎರಡು ಸಾವಿರ ವರ್ಷದ ಹಿಂದೆಯೇ ಭಾರತದ ರಾಜ, ಮಹಾರಾಜರು ತಮ್ಮ ಬಿಡುವಿನ ವೇಳೆ ಆಡುತ್ತಿದ್ದ ಚೆಸ್ ಇಂದು ರಷ್ಯಾ, ಯೂರೋಪ್ ದೇಶಗಳ ಪ್ರಮುಖ ಆಟವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕೆ. ಪ್ರಾಣೇಶ್ ಯಾದವ್ ಅವರ ಚೆಸ್ ಆಟ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು.
ಚೆಸ್ ಚಾಂಪಿಯನ್ ಗೌರವಾಧ್ಯಕ್ಷ ಎಲ್.ಎಂ.ಎಲ್. ಶಾಸ್ತ್ರಿ, ಸಂಯುಕ್ತ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಉಪಾಧ್ಯಕ್ಷ ಆರ್. ಹನುಮಂತು, ಉಪಾಧ್ಯಕ್ಷ ವಿನಯ್ ಕುರ್ತುಕೋಟಿ, ರೋವರ್ಸ್‌ ಕ್ಲಬ್ ಅಧ್ಯಕ್ಷ   ಎಚ್.ಡಿ. ರಮೇಶ್‌ಶಾಸ್ತ್ರಿ, ಜ್ಲ್ಲಿಲಾ ಚೆಸ್ ಸಂಸ್ಥೆ ಅಧ್ಯಕ್ಷ ಶ್ರೀಕೃಷ್ಣ ಉಡುಪ, ರೋಟರಿ ವಿಜಯಕುಮಾರ್, ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು. ಲಿಜಿ ಅಂತೋಣಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಸ್ವಾಗತಿಸಿದರು. ಫಾಲ್ಗುಣ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.