ADVERTISEMENT

ಜನಜಾಗೃತಿ ಮೂಡಿಸಲು ಕರೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST
ಜನಜಾಗೃತಿ ಮೂಡಿಸಲು ಕರೆ
ಜನಜಾಗೃತಿ ಮೂಡಿಸಲು ಕರೆ   

ಶಿಕಾರಿಪುರ: ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನಗಳು ಕಳೆದ ನಾಲ್ಕು ತಿಂಗಳಿನಿಂದ ಜನರಿಗೆ ಸಿಗುತ್ತಿಲ್ಲ. ಇದರ ವಿರುದ್ದ ಕಾಂಗ್ರೆಸ್ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಈರಪ್ಪ ಮಾಳಗೊಂಡನಕೊಪ್ಪ ಆಗ್ರಹಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳಿದ್ದರೂ ಸರಿ, ಆಸ್ತಿ ಎಷ್ಟಿದ್ದರೂ ಪರವಾಗಿಲ್ಲ ವೃದ್ಧರಿಗೆ ಗೌರವಧನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಇದೀಗ ‘ಅನರ್ಹರ ಸಂಖ್ಯೆ ಹೆಚ್ಚಿದೆ’ ಎನ್ನುವ ನೆಪದಲ್ಲಿ ಸಮಾಜದ ಅಶಕ್ತರಿಗೆ ಗೌರವಧನ ಸಿಗದಂತಾಗಿರುವುದು ದುರದುಷ್ಟಕರ ಎಂದರು.

ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರ ಸಭೆ ಕರೆಯುವ ಪದ್ಧತಿಯನ್ನು ಮುಖಂಡರು ಕೈಬಿಡಬೇಕು. ಜನತೆಗೆ ಸರ್ಕಾರಿ ಸೌಲಭ್ಯ ಕೊಡಿಸುವುದಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಹಣ ಖರ್ಚಾಗುತ್ತಿದ್ದರೂ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅಸಮರ್ಪಕ ಸರಬರಾಜಿನಿಂದಾಗಿ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಇದನ್ನು ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಎಚ್.ಎಸ್. ಶಾಂತವೀರಪ್ಪ ಗೌಡ,  ಮಹಾದೇವಪ್ಪ, ಜಿ.ಪಂ. ಸದಸ್ಯ ಈಸೂರು ಬಸವರಾಜ್, ಚುರ್ಚಿಗುಂಡಿ ಪಾಲಾಕ್ಷಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.