ADVERTISEMENT

ಜಾತಿ ಅಸ್ತಿತ್ವಕ್ಕೆ ಪೈಪೋಟಿ ಬೇಡ: ಸಿಎಂ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಮಂಗಳೂರು:  `ಕೆಲ ಬಲಾಢ್ಯ ಜಾತಿಗಳು ಎಲ್ಲೊ ಒಂದು ಹಂತದಲ್ಲಿ ತಮ್ಮ ಅಸ್ತಿತ್ವ ತೋರಿಸುವ ಮೂಲಕ ಸಮಾಜದ ಮೇಲೆ ಪ್ರಭಾವ ಬೀರುವ ಯತ್ನ ಮಾಡುತ್ತವೆ. ಪೈಪೋಟಿಗಾಗಿ ಸಮಾಜದ ದುರ್ಬಳಕೆ ಆಗಬಾರದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೂಚ್ಯವಾಗಿ ಹೇಳಿದರು.

ನಗರದ ಸಿ.ವಿ.ನಾಯಕ್ ಹಾಲ್‌ನಲ್ಲಿ ಭಾನುವಾರ ಕುಡಾಲ್ ದೇಶಸ್ಥ ಆದ್ಯಗೌಡ ಬ್ರಾಹ್ಮಣ ಸಂಘದ ಸಮಾವೇಶ ಉದ್ಘಾಟಿಸಿದ ಅವರು `ಎಲ್ಲ ಜಾತಿಗಳಿಗೆ ಸಂಘಟನೆ ಇರಬೇಕು. ಆದರೆ ಅವು ಪೈಪೋಟಿಗೆ ಇಳಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ~ ಎಂದು ಹೇಳಿದರು.

`ನಾನು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಈ ಸಮಾಜದ ಕಾಣಿಕೆಯೂ ಇದೆ. ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್, ಲೋಕಸಭಾ ಸದಸ್ಯ ಏಕನಾಥ ರಾಯ್ಕರ್, ಏರ್ ಮಾರ್ಷಲ್ ಎ.ವಿ.ನಾಯಕ್ ಮೊದಲಾದವರು ಆದ್ಯಗೌಡ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದು, ದೇಶಕ್ಕೂ ಕೊಡುಗೆ ನೀಡಿದ್ದಾರೆ~  ಎಂದು ಹೇಳಿದರು.

ಈ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದ ಮುಖ್ಯಮಂತ್ರಿ,  ಸಮಾಜದ ಅಭಿವೃದ್ಧಿಗೆ ನೆರವಾಗಲು ಸರ್ಕಾರ ಸಿದ್ಧವಿದೆ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಶಾಸಕ ಕೃಷ್ಣ ಪಾಲೆಮಾರ್, ಕೆಪಿಎಸ್‌ಸಿ ಸದಸ್ಯ ಎಸ್.ಆರ್.ರಂಗಮೂರ್ತಿ, ಸಮಾಜದ ಅಧ್ಯಕ್ಷ ಪ್ರವೀಣ್ ಎಸ್.ದರ್ಬೆ, ಉಪಾಧ್ಯಕ್ಷ ಡಾ.ಪ್ರವೀಣ್ ನಾಯಕ್, ಸಮಾಜದ ಗಣ್ಯರಾದ ಕೆ.ಸಂಜೀವ ಭಟ್, ಡಾ.ಜಯಪ್ರಕಾಶ್ ಮೊದಲಾದವರು ಇದ್ದರು.

ಎಮ್ಮೆ ಹಾಲಿಗೆ ಹೆಚ್ಚು 3ರೂ.
ಬೀದರ್: ಉತ್ತರ ಕರ್ನಾಟಕದ ಐದು ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಪ್ರತಿ ಲೀಟರ್ ಎಮ್ಮೆ ಹಾಲಿಗೆ ರೂ. 3 ಹೆಚ್ಚುವರಿ ಬೆಲೆ ನೀಡಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಪ್ರಕಟಿಸಿದರು.ನಗರದ ಸಿಂಧೋಲ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ನವೀಕೃತ ಬೀದರ್ ಡೇರಿ, ಹಾಲು ಪ್ಯಾಕಿಂಗ್ ಘಟಕ ಉದ್ಘಾಟಿಸಿ ಮಾತನಾಡಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT