ADVERTISEMENT

ಜಾತಿ ನಿಂದನೆ: ಸವಿತಾ ಸಮಾಜ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST
ಜಾತಿ ನಿಂದನೆ: ಸವಿತಾ ಸಮಾಜ ಪ್ರತಿಭಟನೆ
ಜಾತಿ ನಿಂದನೆ: ಸವಿತಾ ಸಮಾಜ ಪ್ರತಿಭಟನೆ   

ಕಡೂರು: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಸವಿತಾ ಸಮಾಜದ ಜನಪದ ಗಾಯಕ ಹಳ್ಳಿ ಶ್ರೀನಿವಾಸ್ ಅವರನ್ನು ಸಂಗೀತ ನಿರ್ದೇಶಕ ಹಂಸಲೇಖ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಸವಿತಾ ಸಮಾಜ ಮುಖಂಡರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಮುಖಂಡರು ಮರವಂಜಿ ವೃತ್ತದಿಂದ ತಾಲ್ಲೂಕು ಕಚೇರಿಯವರೆಗೆ ಕಾಲು ನಡಿಗೆಯಲ್ಲಿ ಪ್ರತಿಭಟನೆ ನಡೆಸಿ ಹಂಸಲೇಖಾ ವಿರುದ್ಧ ಘೋಷಣೆ ಕೂಗಿದರು.

‘ಎಲ್ಲಾ ಶುಭ ಸಮಾರಂಭಗಳಿಗೂ ಸಮಾಜದ ಸಹಾಯ ಪಡೆಯುತ್ತಾರೆ. ನಮ್ಮ ವಿರುದ್ಧವೇ ಅಪಪ್ರಚಾರ ಮಾಡುತ್ತಾರೆ ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ’ ಎಂದು ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಬಿ.ಎಲ್.ಶ್ರೀನಿವಾಸ್ ತಿಳಿಸಿದರು.

‘ನಮ್ಮ ಸಮಾಜವನ್ನು ಶತಮಾನಗಳಿಂದ ಶೋಷಣೆ ಮಾಡುತ್ತಾ ಬಂದಿದ್ದು, ಈಗಲೂ ಶೋಷಣೆಗೆ  ಪ್ರಯತ್ನಿಸುತ್ತಿದ್ದಾರೆ’ ಎಂದರು.

ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಎಸ್.ಬಾಲು ಮಾತನಾಡಿ, ಸಮಾಜದ ವಿರುದ್ಧ ನಿಂದನೆಗಳು ತಕ್ಷಣ ನಿಲ್ಲಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಿ.ಆರ್.ರೂಪಾ ಅವರಿಗೆ ಮನವಿ ಸಲ್ಲಿಸಿದರು. 

ರಾಜ್ಯ ಸಹಕಾರ್ಯದರ್ಶಿ ಹಿ.ಶಿ.ರವಿಕುಮಾರ್, ಎನ್.ವೆಂಕಟೇಶ್, ಕೆ.ಟಿ.ನವೀನ್, ಎಂ.ಎಚ್.ಪ್ರಕಾಶ್, ಎನ್.ದೀಪು, ಸುನೀಲ್, ಉಮೇಶ್, ಬಿ.ಆರ್.ಜಗದೀಶ್, ಪ್ರಕಾಶ್, ರಾಜು, ಲೋಕೇಶ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.