ಮೈಸೂರು: ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮುಖಂಡರ ಮೇಲೆ ಮುನಿಸಿಕೊಂಡಿದ್ದ ಇಲ್ಲಿನ ಚಾಮರಾಜ ಕ್ಷೇತ್ರದ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರುವುದಾಗಿ ಭಾನುವಾರ ಅಧಿಕೃತವಾಗಿ ಘೋಷಿಸಿದರು.
ನಗರದಲ್ಲಿ ಒಕ್ಕಲಿಗರ ಸಂಘ ಏರ್ಪಡಿಸಿದ್ದ ವಿದ್ಯಾರ್ಥಿನಿಯರ ವಸತಿ ನಿಲಯದ ಉದ್ಘಾಟನಾ ಸಮಾರಂಭದ ಬಳಿಕ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರ ಸಮ್ಮುಖದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಾನಸಿಕವಾಗಿ ಜೆಡಿಎಸ್ ಸೇರಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ತೊರೆಯುವುದು ನಿಶ್ಚಿತ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದರು.
ಯಡಿಯೂರಪ್ಪ ಎಡವಿದ್ದಾರೆ. ಅವರು ಈಗ ಹೆಡೆ ಮುಚ್ಚಿದ ಹಾವು. ಹೀಗಾಗಿ ಯಡಿಯೂರಪ್ಪ ಹಾಗೂ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಟೀಕಿಸಿದರು.
ಶಂಕರಲಿಂಗೇಗೌಡ ಅವರನ್ನು ಜೆಡಿಎಸ್‌ಗೆ ಸ್ವಾಗತಿಸುತ್ತೇನೆ. ಸದ್ಯದಲ್ಲೆ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಿಂದ ಹೊರ ಹಾಕುವ ಕಾಲ ಸನ್ನಿಹಿತವಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ಎಚ್‌ಡಿ. ರೇವಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.