ADVERTISEMENT

ಜೈವಿಕ ಇಂಧನ ಬಳಕೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST
ಜೈವಿಕ ಇಂಧನ ಬಳಕೆ ಅನಿವಾರ್ಯ
ಜೈವಿಕ ಇಂಧನ ಬಳಕೆ ಅನಿವಾರ್ಯ   

ರಾಮನಗರ: ಜನಸಂಖ್ಯಾ ಸ್ಫೋಟ ಸಂಭವಿಸಿದಂತೆಲ್ಲಾ ಇಂಧನದ ಬಳಕೆ ಮಿತಿ ಮೀರಿ ಏರುತ್ತಿದೆ. 2025ರ ವೇಳೆಗೆ ಪೆಟ್ರೋಲಿಯಂ ಉತ್ಪನ್ನಗಳು ಅಂತ್ಯವಾಗುತ್ತವೆ ಎಂದು ಜೈವಿಕ ಇಂಧನ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಮುಖ್ಯಸ್ಥ ವೈ.ಬಿ.ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು.

ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯ (ಎಐಸಿಟಿಇ) ಆಶ್ರಯದಲ್ಲಿ ನಡೆದ ಶಕ್ತಿ ಮೂಲಗಳ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳ ಕುರಿತ ಸಿಬ್ಬಂದಿ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ದೇಶದ ಪ್ರಸ್ತುತ ಜನಸಂಖ್ಯೆ 120 ಕೋಟಿ ಮೀರಿದೆ. ಇಂಧನದ ಬೇಡಿಕೆಯು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇವತ್ತಿನ ಬೇಡಿಕೆಗೆ ತಕ್ಕಷ್ಟು ಇಂಧನ ಪೂರೈಸುವಲ್ಲಿ ವಿಫಲವಾಗುತ್ತಿದ್ದೇವೆ. ಆದ್ದರಿಂದ ಸರ್ಕಾರ ಪರ್ಯಾಯ ವಿದ್ಯುತ್ ಮಾರ್ಗಗಳನ್ನು ಶೋಧಿಸುವುದರ ಕಡೆಗೆ ಚಿಂತಿಸಬೇಕು ಹಾಗೂ ಸಾರ್ವಜನಿಕರು ಪವನ ಶಕ್ತಿ, ಸೌರಶಕ್ತಿ ಇತ್ಯಾದಿ ಪರ್ಯಾಯ ಶಕ್ತಿ ಮೂಲಗಳನ್ನು ಬಳಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು ಎಂದರು.

ಎನ್‌ಟಿಸಿಎಸ್‌ಇಯ ನಿರ್ದೇಶಕ ಡಾ.ಎಚ್.ನಾಗಣ್ಣಗೌಡ ಮಾತನಾಡಿ, ಆಹಾರ, ಶಿಕ್ಷಣ, ಆರೋಗ್ಯ ಇತ್ಯಾದಿ ಮೂಲಭೂತ ಅಗತ್ಯತೆಗಳಂತೆ ವಿದ್ಯುತ್ ಕೂಡ ಜೀವನಾವಶ್ಯಕವಾಗಿದೆ. ನೈಸರ್ಗಿಕವಾಗಿ ಲಭ್ಯವಿರುವ ಶೇ.60ರಷ್ಟು ಶಕ್ತಿ ಮೂಲಗಳನ್ನು ಖಾಲಿ ಮಾಡಿದ್ದೇವೆ. ಇನ್ನು ಉಳಿದಿರುವ ಶೇ. 40ರಷ್ಟನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಶಕ್ತಿ ಮೂಲಗಳೇ ಇಲ್ಲದಂತಾಗುತ್ತದೆ ಎಂದರು.

ಗೌಸಿಯಾ ತಾಂತ್ರಿಕ ಶಿಕ್ಷಣ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಡಾ.ಮುಮ್ತಾಜ್ ಅಲಿ ಖಾನ್ ಮಾತನಾಡಿ ಭಾರತದಲ್ಲಿ ಸೌರಶಕ್ತಿ ಮತ್ತು ಪವನ ಶಕ್ತಿಯ ಉತ್ಪಾದನೆ ಹಾಗೂ ಬಳಕೆಗೆ ವಿಫುಲ ಅವಕಾಶಗಳಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಅಸಂಪ್ರದಾಯಿಕ ಇಂಧನ ಮೂಲಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಆದರೆ ಭಾರತ ಸರ್ಕಾರ ಸಾರ್ವಜನಿಕರಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಬಳಸಲು ಅಗತ್ಯ ನೆರವು ನೀಡದಿರುವುದು ವಿಪರ್ಯಾಸ ಎಂದರು.

ಗೌಸಿಯಾ ಕಾಲೇಜಿನ ಪ್ರಾಂಶುಪಾಲರದ ಡಾ. ಮೊಹಮದ್ ಹನೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಮೀರ್ ಶಫೀ ಉಲ್ಲಾ, ಸಂಚಾಲಕ ಪ್ರೊ .ಎಚ್.ವಿ.ಬೈರೇಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.