ADVERTISEMENT

ಜ್ಞಾನಕ್ಕೆ ಆದ್ಯತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಶಿವಮೊಗ್ಗ: ಸಮಾಜದಲ್ಲಿ ಮೇಲು-ಕೀಳು ಇದ್ದರೂ ವ್ಯಕ್ತಿಯ ಬೌದ್ಧಿಕತೆ, ಜ್ಞಾನಕ್ಕೆ ಆದ್ಯತೆ ನೀಡಿದಾಗ ಮಾತ್ರ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿದಂತಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಜೆ.ಕೆ. ರಮೇಶ್ ಅಭಿಪ್ರಾಯಪಟ್ಟರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ `ಚಂದನ ಸಭಾಂಗಣ~ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಸ್ತಿ ನಾಟಕ `ಕಾಕನಕೋಟೆ~ ಹಾಗೂ ಹಾರ್ಪರ್‌ಲಿ ಅವರ `ಟು ಕಿಲ್ ಎ ಮಾಕಿಂಗ್ ಬರ್ಡ್~ ಕುರಿತ ಎರಡು ದಿನಗಳ ಸಾಹಿತ್ಯ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳಲ್ಲಿ ಅನೇಕರು ಬುದ್ಧಿವಂತರಿದ್ದರೂ ಅವರ ಜಾತಿ, ಸಮುದಾಯದಿಂದಾಗಿ ಬೆಳಕಿಗೆ ಬಾರದೇ ಹಿಂದುಳಿದಿದ್ದಾರೆ. ಅಂತಹ ಅಲಕ್ಷಿತ ಸಮುದಾಯವನ್ನು ಇತಿಹಾಸದ ಕಕ್ಷೆಯೊಳಗೆ ತರುವ ಕಾರ್ಯವನ್ನು ಮಾಸ್ತಿ ಅವರು ತಮ್ಮ `ಕಾಕನಕೋಟೆ~ ನಾಟಕದಲ್ಲಿ ಮಾಡಿದ್ದಾರೆ ಎಂದರು.

ನವೋದಯದ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸಹುಟ್ಟು ನೀಡಿದ ಮಾಸ್ತಿ ಅವರ ಮನೆ ಭಾಷೆ ತಮಿಳು. ಆದರೆ, ಅವರ ಬರಹಗಳು ಮಾತ್ರ ಕನ್ನಡದವು ಎಂದು ಅಭಿಪ್ರಾಯಪಟ್ಟರು.

ಕನ್ನಡದಪರ ನಿರಂತರವಾಗಿ ಹೋರಾಟ ನಡೆಸಿದ ಮಾಸ್ತಿ ತಮ್ಮ `ಕಾಕನಕೋಟೆ~ಯಲ್ಲಿ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದ ಕಾಡುಕುರುಬರ ಜೀವನ, ಉನ್ನತ ವರ್ಗದವರ ದಬ್ಬಾಳಿಕೆಗಳನ್ನು ನಿರೂಪಿಸುತ್ತಾರೆ. ಇದು ಪ್ರಸ್ತುತ ಸಮಾಜಕ್ಕೆ ಆವಶ್ಯಕವಿದೆ ಎಂದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಡಿ.ಜಿ. ರಮೇಶ್, ಪ್ರಾಂಶುಪಾಲ ಪ್ರೊ.ಎಚ್.ಎ. ನಾಗರಾಜ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಗಾಯತ್ರಿ ನಿರೂಪಿಸಿದರು. ಪರಮೇಶ್ವರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.