ADVERTISEMENT

ಟ್ಯಾಂಕ್‌ನಲ್ಲಿ ಹೆಗ್ಗಣ: ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST
ಟ್ಯಾಂಕ್‌ನಲ್ಲಿ ಹೆಗ್ಗಣ: ಕುಡಿಯುವ ನೀರಿಗೆ ಪರದಾಟ
ಟ್ಯಾಂಕ್‌ನಲ್ಲಿ ಹೆಗ್ಗಣ: ಕುಡಿಯುವ ನೀರಿಗೆ ಪರದಾಟ   

ಸೋಮವಾರಪೇಟೆ: ಹಾರಂಗಿ ನೀರು ಸರಬರಾಜು ಯೋಜನೆಯ ನೀರಿನ ಟ್ಯಾಂಕ್‌ನಲ್ಲಿ ಹೆಗ್ಗಣವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಗಾಗಲೇ ಸರಬರಾಜಾಗಿರುವ ನೀರನ್ನು ನಗರದ ಜನತೆ ಬಳಸದಂತೆ ಪಟ್ಟಣ ಪಂಚಾಯಿತಿ ಮನವಿ ಮಾಡಿದ್ದು, ನೀರಿಗಾಗಿ ಜನತೆ ಪರದಾಡುವಂತಾಗಿದೆ.

ನಗರದ ಮಡಿಕೇರಿ ರಸ್ತೆಯಲ್ಲಿರುವ ಪಂಪ್ ಹೌಸ್‌ನ ಹಿಂಭಾಗದ ಟ್ಯಾಂಕ್‌ನಲ್ಲಿ ಶನಿವಾರ ದುರ್ವಾಸನೆ ಬರುತ್ತಿರುವುದನ್ನು ಪರಿಶೀಲಿಸಿದಾಗ ಹೆಗ್ಗಣ ಕೊಳೆತಿರುವುದು ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಜಯ ಕರ್ನಾಟಕ ಸಂಘಟನೆಯ ಸದಸ್ಯರು, ಸಾರ್ವಜನಿಕರು ಸ್ಥಳಕ್ಕೆ ತೆರಳಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಪಂಪ್‌ಹೌಸ್ ನೌಕರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್.ಮೂರ್ತಿ ಅವರು ಪಂಪ್‌ಹೌಸ್‌ನ ನೌಕರರನ್ನು ತರಾಟೆಗೆ ತೆಗೆದುಕೊಂಡರು. ಸರಬರಾಜಾದ ನೀರನ್ನು ಉಪಯೋಗಿಸದಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಯಿತು. ಹೀಗಾಗಿ ನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.

`ನೀರು ಸರಬರಾಜು ಕೇಂದ್ರಕ್ಕೆ ಸೂಕ್ತ ಭದ್ರತೆ ಇಲ್ಲ. ಟ್ಯಾಂಕ್‌ಗಳೆಲ್ಲ ತೆರೆದುಕೊಂಡಿದ್ದು, ಅದರೊಳಗೆ ಯಾರಾದರೂ ಬೀಳಬಹುದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಹಿಂದು ಜಾಗರಣಾ ವೇದಿಕೆಯ ಸಂಚಾಲಕ ಸುಭಾಷ್ ತಿಮ್ಮಯ್ಯ, ಮಸಗೋಡು ಸತೀಶ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.