ADVERTISEMENT

ತಲಕಾವೇರಿ: ಪ್ರವಾಸಿ ತಾಣಕ್ಕೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 7:20 IST
Last Updated 14 ಫೆಬ್ರುವರಿ 2011, 7:20 IST

ಮಡಿಕೇರಿ: ‘ಕೊಡಗಿನ ಧಾರ್ಮಿಕ ಶ್ರದ್ಧಾ ಕೇಂದ್ರವಾದ ತಲಕಾವೇರಿಯನ್ನು ಯಾವುದೇ ಕಾರಣಕ್ಕೂ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಅವಕಾಶ ನೀಡುವುದಿಲ್ಲ’ ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಭಾನುವಾರ ಇಲ್ಲಿ ಸ್ಪಷ್ಟವಾಗಿ ಹೇಳಿದರು. ಕಾವೇರಿ ಜನ್ಮಭೂಮಿ ಟ್ರಸ್ಟ್‌ನ ಆಶ್ರಯದಲ್ಲಿ ಭಾಗಮಂಡಲ ಸನಿಹದ ಚೇರಂಗಾಲದಲ್ಲಿ ಹಮ್ಮಿಕೊಂಡಿದ್ದ ‘ತವರೂರ ಕೂಟ’ದ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಪ್ರವಾಸಿಗರ ಅನುಕೂಲಕ್ಕಾಗಿ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಹೆಲಿಪ್ಯಾಡ್ ನಿರ್ಮಿಸುವುದು ಕೂಡ ಬೇಡ. ಶ್ರದ್ಧಾ ಕೇಂದ್ರದ ಬಗ್ಗೆ ನಂಬಿಕೆಯಿರುವ ಭಕ್ತರು ಕ್ಷೇತ್ರಕ್ಕೆ ಬಂದೇ ಬರುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ತಲಕಾವೇರಿ ಪ್ರವಾಸಿ ತಾಣವಾಗಿ ಮಾರ್ಪಡಬಾರದು. ತೀರ್ಥೋದ್ಭವ ಸಂದರ್ಭದಲ್ಲಿ ಪವಿತ್ರ ಕುಂಡಿಕೆಯಿಂದ ತೀರ್ಥ ಬರುವುದು ಸುಳ್ಳು ಎಂದು ಪ್ರತಿಪಾದಿಸುವ ವ್ಯಕ್ತಿಗಳು ಯಾರೇ ಇರಲಿ ಅಥವಾ ಎಷ್ಟೇ ದೊಡ್ಡವರಿರಲಿ. ಅಂತಹವರು ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಅವಕಾಶವಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಮೂಲಭೂತ ಸೌಕರ್ಯಗಳಿಗೆ ಒತ್ತು: ‘ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಂತ-ಹಂತವಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಜಿಲ್ಲೆಯ ಚೆಂಬು, ಪೆರಾಜೆ, ತೆರಾಲು ಮತ್ತಿತರ ಕುಗ್ರಾಮಗಳಿಗೆ ಬಸ್, ಸೇತುವೆ ನಿರ್ಮಾಣದಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗಿದೆ. ಭಾಗಮಂಡಲ, ಕೋರಂಗಾಲ, ಸಣ್ಣಪುಲಿಕೋಟು ಗ್ರಾಮಗಳ ರಸ್ತೆಯ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ’ ಎಂದು ವಿಧಾನಸಭಾ ಅಧ್ಯಕ್ಷರು ಭರವಸೆ ನೀಡಿದರು.

‘ಗ್ರಾಮೀಣ ಜನರ ಬದುಕು ಹಸನಾಗುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ಕೊಡಗು ಅರಣ್ಯ ಪ್ರದೇಶವಾಗಿರುವುದರಿಂದ ಕಾಡನ್ನು ಉಳಿಸುವುದರ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಬೇಕು. ಆದರೆ, ಅರಣ್ಯ ಸಂರಕ್ಷಣೆ ಬಗ್ಗೆ ನಾವು ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ.

ಅಂತೆಯೇ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಯಾರ ಉಪದೇಶವೂ ನಮಗೆ ಬೇಕಾಗಿಲ್ಲ’ ಎಂದು ಪರೋಕ್ಷವಾಗಿ ಪರಿಸರವಾದಿಗಳ ವಿರುದ್ಧ ತಿರುಗಿ ಬಿದ್ದರು.‘ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ಅಂತರ್ಜಲ ಸಂರಕ್ಷಣೆಗೆ ಅಕೇಷಿಯಾ ಹಾಗೂ ನೀಲಗಿರಿ ಮರ ಬೆಳೆಸುವುದನ್ನು ನಿಷೇಧಿಸುವಂತೆ ನಾನು ಕೂಡ ಅರಣ್ಯ ಸಚಿವರಿಗೆ ಸಲಹೆ ಮಾಡಿದ್ದೆ. ಅದರಂತೆ, ಈ ಭಾಗದಲ್ಲಿ ನೀಲಗಿರಿ ಹಾಗೂ ಅಕೇಷಿಯಾ ಬೆಳೆಸುವುದನ್ನು ಸರ್ಕಾರ ನಿಷೇಧಿಸಿದೆ’ ಎಂದರು.

‘2020ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮಬೇಕೆಂಬ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಯ 13 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ. ರಾಷ್ಟ್ರಮಟ್ಟದಲ್ಲಿಯೇ ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುತ್ತಿದ್ದು, ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ, ಕೃಷಿ ಉಪಕರಣಗಳಿಗೆ ಶೇ 75ರಷ್ಟು ಸಹಾಯಧನ ನೀಡಲು ಉದ್ದೇಶಿಸಿದೆ’ ಎಂದರು.

ಕಾವೇರಿ ಜನ್ಮಭೂಮಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕೊಟ್ಟನ ಸಿ. ರವಿಕುಮಾರ್ ಸ್ವಾಗತಿಸಿದರು. ಕೊಟ್ಟಕೇರಿಯನ ಲೀಲಾ ದಯಾನಂದ್ ಪ್ರಾರ್ಥಿಸಿದರು. ನಿವೃತ್ತ ಲೆಫ್ಟಿನೆಂಟ್ ಜನರಲ್ ಆರ್.ವಿ.ಎನ್. ಕದಾಂಬಿ, ಕರ್ನಲ್ ಜಯಂತ್ ಪೂವಯ್ಯ, ನಿವೃತ್ತ ಮೇಜರ್ ಜನರಲ್‌ಗಳಾದ ಬಿ.ಎ. ಕಾರ್ಯಪ್ಪ, ಎಂ.ಸಿ. ನಂಜಪ್ಪ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ, ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ವಿಂಗ್ ಕಮಾಂಡರ್ ಸಿ.ಸಿ. ಅಪ್ಪಣ್ಣ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಚೇರಂಗಾಲ, ತಣ್ಣಿಮಾನಿ, ತಾವೂರು ಸುತ್ತಮುತ್ತಲಿನ ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬ ವರ್ಗದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.