ADVERTISEMENT

ದತ್ತೂರಿ ಬೀಜ ತಿಂದು 11 ಚಿಣ್ಣರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:00 IST
Last Updated 14 ಸೆಪ್ಟೆಂಬರ್ 2011, 19:00 IST

ಪಾಂಡವಪುರ: ಹಣ್ಣು ಎಂದು ತಿಳಿದು ದತ್ತೂರಿ ಬೀಜಗಳನ್ನು ತಿಂದು 11 ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ವಿಶ್ವನಾಯಕ (3), ಮಹಾಲಕ್ಷ್ಮಿ (6), ಯುವರಾಜ (4), ಚಂದ್ರಿಕಾ(2), ಆಶಾ (5), ಪ್ರಿಯಾ(3), ಸುರೇಶ (5), ಅಪ್ಪು (3) ಸೇರಿದಂತೆ 11 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಇವರೆಲ್ಲರೂ ಉತ್ತರ ಕರ್ನಾಟಕ ವಿವಿಧೆಡೆಗಳಿಂದ ಕೂಲಿ ಅರಸಿ ಇಲ್ಲಿಗೆ ಆಗಮಿಸಿರುವ ಕೂಲಿಕಾರರ ಮಕ್ಕಳು. ಕಬ್ಬು ಕಟಾವಿಗೆ ದೊಡ್ಡವರು ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಬೇಲಿಯ ಪೊದೆಯಡಿ ಆಟವಾಡುತ್ತಿದ್ದ ಈ ಮಕ್ಕಳು ದತ್ತೂರಿ ಬೀಜಗಳನ್ನು ಹಣ್ಣು ಎಂದು ಭಾವಿಸಿ ಸೇವಿಸಿದರು. ಕೆಲವೇ ನಿಮಿಷಗಳಲ್ಲಿ ಬಿದ್ದು ಒದ್ದಾಡಲು ಆರಂಭಿಸಿದರು. 

ಇದನ್ನು ಗಮನಿಸಿದ ಗ್ರಾಮಸ್ಥರು ಮಕ್ಕಳನ್ನು ತಕ್ಷಣವೇ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಕಂದಮ್ಮಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ವಿಶ್ವನಾಯಕ, ಮಹಾಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.