ಉಪ್ಪಿನಂಗಡಿ: ನಕ್ಸಲ್ ತಂಡ ಶಿಶಿಲ ಗ್ರಾಮದ ಹೊಳೆಗುಂಡಿ ಮತ್ತು ಅಮ್ಮುಡಂಗೆ ಪರಿಸರದ ಎರಡು ಮನೆಗಳಿಗೆ ಭೇಟಿ ನೀಡಿರುವ ಹಿನ್ನೆಲೆ ಹಾಗೂ ಮೀಯಾರು ಅರಣ್ಯದಲ್ಲಿ ಅವರ ಅಡಗುತಾಣ ಇರಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಶೋಧ ಕಾರ್ಯ ಚುರುಕುಗೊಳಿಸಿದೆ.
ಐದು ಪ್ರತ್ಯೇಕ ತಂಡಗಳು ಹೊಳೆಗುಂಡಿ ಮತ್ತು ಕಾಯರ್ತಡ್ಕ ಮೂಲಕ ಕಾಡಿನೊಳಗೆ ಪ್ರವೇಶ ಮಾಡಿ ಚುರುಕಿನ ಕಾರ್ಯಾಚರಣೆ ಆರಂಭಗೊಳಿಸಿದೆ. ಸಂಜೆ ಹೊತ್ತಿಗೆ ಎರಡು ತಂಡಗಳು ಮರಳಿ ಶಿಶಿಲ ಗ್ರಾಮ ಪ್ರವೇಶಿಸಿದ್ದು, ಮೂರು ತಂಡಗಳು ಕಾಡಿನಲ್ಲಿ ಠಿಕಾಣಿ ಹೂಡಿರುವುದಾಗಿ ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ 6 ಗಂಟೆಗೆ ನಕ್ಸಲ್ ನಿಗ್ರಹ ಪಡೆ ಕಮಾಂಡೆಂಟ್ ಅಲೋಕ್ ಕುಮಾರ್ ನೇತೃತ್ವದ ತಂಡ ಹೊಳೆಗುಂಡಿ ಮೂಲಕ ಕಾಡು ಪ್ರವೇಶ ಮಾಡಿ ಗಾಳಿಕಲ್ಲು, ಕನ್ನಿಕಯ ಮತ್ತು ಬೈರಾಪುರ ಸಂಪರ್ಕದ ಚಿರುವೆ ಕಾಡು, ಸಣ್ಣ ಕಾಡು ಪರಿಸರದಲ್ಲಿ ಸಾಗಿ ಮೂಡಿಗೆರೆ ಗಡಿ ಭಾಗ ಬಾಲೂರು ರಕ್ಷಿತಾರಣ್ಯದ ಗಡಿ ಭಾಗದವರೆಗೆ
ಸುಮಾರು 10 ಕಿ. ಮೀ ಗೂ ಅಧಿಕ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಸಂಜೆಯ ಹೊತ್ತಿಗೆ ಮತ್ತೆ ಶಿಶಿಲ ಗ್ರಾಮಕ್ಕೆ ಹಿಂತಿರುಗಿದೆ.
ಮದ್ಯದ ಬಾಟಲಿ, ಬಟ್ಟೆ ಪತ್ತೆ: ಕಾಡಿನಲ್ಲಿ ನಕ್ಸಲ್ ಪಡೆ ಕಾರ್ಯಾಚರಣೆ ವೇಳೆ ಮದ್ಯದ ಬಾಟಲಿ, ತಿಂಡಿ ಪೊಟ್ಟಣ, ಬಟ್ಟೆ, ತಂತಿ, ಸರಿಗೆ ಇತ್ಯಾದಿ ವಸ್ತುಗಳು ಪತ್ತೆ ಆಗಿರುವುದಾಗಿ ಹೇಳಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಪುತ್ತೂರು ಎಎಸ್‌ಪಿ ಅನುಚೇತ್, ನಕ್ಸಲ್ ಪಡೆ ಇನ್‌ಸ್ಪೆಕ್ಟರ್ ಪ್ರಸನ್ನ ಕುಮಾರ್, ರಾಜು ಭಾಗವಹಿಸಿದ್ದರು.
ನಕ್ಸಲ್ ಬೆಂಬಲಿಸಿ ಬರಹ: ಈ ಮಧ್ಯೆ ನಿಡ್ಲೆ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಪ್ರಯಾಣಿಕರ ತಂಗುದಾಣದ ಗೋಡೆಯಲ್ಲಿ `ನಕ್ಸಲರನ್ನು ಬೆಂಬಲಿಸಿ- ಸಿಪಿಐಎಂ, ಇಂಕ್ವಿಲಾಬ್ ಜಿಂದಾಬಾದ್~ ಎಂದು ಕೆಂಪು ಅಕ್ಷರದಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಕಾಡಿನ ಅಂಚಿನಲ್ಲಿರುವ ಗ್ರಾಮಗಳಲ್ಲಿ ನಕ್ಸಲರ ಆಗಮನದ ವಿಚಾರವೇ ಮಾತಿಗೆ ಆಹಾರವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.