ADVERTISEMENT

ನಿಸರ್ಗ ಸಂರಕ್ಷಣೆಗೆ ಪರಿಸರ ನಡಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಚಿತ್ರದುರ್ಗ: ಮುಂಜಾನೆಯ ಪಕ್ಷಿಗಳ ಕಲರವ ಆರಂಭವಾಗುವ ಹೊತ್ತಿಗೆ ಕೈಯಲ್ಲೊಂದು ಸಸಿ ಹಿಡಿದು ಹೆಜ್ಜೆ ಹಾಕುತ್ತಾ ಪರಿಸರ ಪ್ರೇಮಿಗಳ ದಂಡು ಶನಿವಾರ ನಗರದ ಚಂದ್ರವಳ್ಳಿಗೆ ಸಾಗಿತು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಬೆಳಿಗ್ಗೆ 6 ಗಂಟೆಗೆ ಆಯೋಜಿಸಲಾಗಿದ್ದ ಪರಿಸರ ನಡಿಗೆ ಕಾರ್ಯಕ್ರಮದ ಮೂಲಕ ನಿಸರ್ಗ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಕಾಡು ಉಳಿಸಿ ನಾಡು ಬೆಳೆಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮಾಲಿನ್ಯಮುಕ್ತ ಪರಿಸರ ಉತ್ತಮ ಬದುಕಿಗೆ ಆಧಾರ ಮುಂತಾದ ಘೋಷಣೆಗಳೊಂದಿಗೆ ನಗರದ ಗಾಂಧಿ ವೃತ್ತದಿಂದ ಆರಂಭವಾದ ನಡಿಗೆಗೆ ಶಿವಮೂರ್ತಿ ಮುರುಘಾ ಶರಣರು ಕೈಯಲ್ಲಿ ಸಸಿ ಹಿಡಿದುಕೊಂಡು ಚಾಲನೆ ನೀಡಿದರು.

ಚಂದ್ರವಳ್ಳಿ ಗಿರಿಧಾಮದಲ್ಲಿ ಸಸಿಯನ್ನು ನೆಟ್ಟು ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ ಪ್ರತಿ ಬಾರಿ ಹೊಸ ಯೋಜನೆಗಳನ್ನು ರೂಪಿಸುತ್ತ ಬರುತ್ತಿದೆ. ಈ ವರ್ಷದ ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿಯಾಗಿ ಜಮುರಾ ಕಪ್, ಬೈಸಿಕಲ್ ಜಾಥಾ, ಶ್ರಮದಾನ ಮತ್ತು ಪರಿಸರ ನಡಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಒಂದೊಂದು ಸಸಿ ವಿತರಿಸಲಾಯಿತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಠಾಧೀಶರು, ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಮುರುಘರಾಜೇಂದ್ರ ಒಡೆಯರ್, ಷಣ್ಮುಖಪ್ಪ, ಮೋಕ್ಷ ರುದ್ರಸ್ವಾಮಿ, ಶೇಷಣ್ಣಕುಮಾರ್, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಇ. ಚಿತ್ರಶೇಖರ್, ಉಮೇಶ್, ಡಾ.ಎಂ. ಬಸವರಾಜ್, ಮಹಡಿ ಶಿವಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷ ಕೆ.ಆರ್. ಶಿವಪ್ರಕಾಶ್, ನಿರ್ದೇಶಕರಾದ ಜೆ.ಸಿ. ಮಲ್ಲಿಕಾರ್ಜುನಪ್ಪ, ಗಿರಿಜಮ್ಮ ಮತ್ತಿತರರು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.