ADVERTISEMENT

ನೀರು ಪೂರೈಕೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST
ನೀರು ಪೂರೈಕೆ ಕಾಮಗಾರಿಗೆ ಚಾಲನೆ
ನೀರು ಪೂರೈಕೆ ಕಾಮಗಾರಿಗೆ ಚಾಲನೆ   

ಚಿಕ್ಕಮಗಳೂರು: ಕುರುವಂಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ರೂ. 2.57 ಕೋಟಿ ವೆಚ್ಚದಲ್ಲಿ ಆರು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ, ಕೊಳವೆ ಮಾರ್ಗ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯ ರಂಗನಾಥ್ ತಿಳಿಸಿದರು.

ಸಮೀಪದ ಬೀಕನಹಳ್ಳಿಯಲ್ಲಿ ಭಾನುವಾರ 18 ಲಕ್ಷ ವೆಚ್ಚದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಈ ಕಾಮಗಾರಿಯನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಕರ್ತಿಕೆರೆ, ಕುರುವಂಗಿ ಗ್ರಾಮಗಳಲ್ಲಿ ಟ್ಯಾಂಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬೀಕನಹಳ್ಳಿ, ನಲ್ಲೂರು, ಅಲ್ಲಂಪುರ ಸೇರಿದಂತೆ ಉಳಿದೆಡೆ ಟ್ಯಾಂಕ್ ನಿರ್ಮಾಣ ಕಾಮಗಾರಿ ಆರಂಭದ ಹಂತದಲ್ಲಿದೆ. ಇದರೊಂದಿಗೆ ವಿವಿಧೆಡೆ ಕೊಳವೆ ಮಾರ್ಗ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಕುಡಿಯುವ ನೀರಿನ ಬವಣೆ ನೀಗಿಸಲು ಆದ್ಯತೆ ಮೇರೆಗೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮುಂಬರುವ ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಲಿದೆ ಎಂದು ಹೇಳಿದರು.

ADVERTISEMENT

ಬೀಕನಹಳ್ಳಿ ಮೊರಾರ್ಜಿ ಶಾಲೆ ರಸ್ತೆ, ತಳಿಹಳ್ಳ- ಚನ್ನಗೊಂಡನಹಳ್ಳಿ, ಸಗನೀಪುರ- ನೆಟ್ಟೆಕೆರೆಹಳ್ಳಿ ರಸ್ತೆ ಸೇರಿದಂತೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ತಳಿಹಳ್ಳ, ಕರ್ತಿಕೆರೆ, ಚಿಕ್ಕನಹಳ್ಳಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಸೇರಿದಂತೆ ಶಾಲಾ ಕೊಠಡಿಗಳ ದುರಸ್ತಿಗೆ 25 ಲಕ್ಷ  ವೆಚ್ಚ ಮಾಡಲಾಗಿದೆ ಎಂದರು. 

ತಾ. ಪಂ. ಸದಸ್ಯ ಎಚ್.ಎಸ್. ಪುಟ್ಟೇಗೌಡ, ಗ್ರಾ.ಪಂ. ಅಧ್ಯಕ್ಷೆ ಸಿದ್ದಮ್ಮ, ಮಾಜಿ ಅಧ್ಯಕ್ಷ ಬೀರೇಗೌಡ, ಎಪಿಎಂಸಿ ಸದಸ್ಯ ಯೋಗಾನಂದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.