ADVERTISEMENT

ನೈರುತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ: ಜೂ.8ಕ್ಕೆ ಚುನಾವಣೆ

ನಾಮಪತ್ರ ಸಲ್ಲಿಕೆಗೆ ಇದೇ 22 ಕೊನೆಯ ದಿನ, ಮೈಸೂರಿನಲ್ಲಿ ಉಮೇದುವಾರಿಕೆ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 19 ಮೇ 2018, 7:02 IST
Last Updated 19 ಮೇ 2018, 7:02 IST
ನೈರುತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ: ಜೂ.8ಕ್ಕೆ ಚುನಾವಣೆ
ನೈರುತ್ಯ ಶಿಕ್ಷಕರ, ಪದವೀಧರರ ಕ್ಷೇತ್ರ: ಜೂ.8ಕ್ಕೆ ಚುನಾವಣೆ   

ಶಿವಮೊಗ್ಗ: ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ಜೂನ್‌ 8ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಮೇ 22 ಕೊನೆಯ ದಿನ.

‘ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಜನಪ್ರತಿನಿಧಿಗಳು ಸರ್ಕಾರಿ ವಾಹನ ಬಳಸುವಂತಿಲ್ಲ’ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಡಾ.ಎಂ.ಲೋಕೇಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಇದೇ 23ರಂದು ನಾಮಪತ್ರ ಪರಿಶೀಲನೆ, 25 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂನ್ 8ರಂದು ಚುನಾವಣೆ. ಮತ ಎಣಿಕೆ ಕಾರ್ಯ ಮೈಸೂರಿನಲ್ಲಿ 12ರಂದು ನಡೆಯಲಿದೆ ಎಂದು ವಿವರ ನೀಡಿದರು.

ADVERTISEMENT

‘ಮೈಸೂರು ವಿಭಾಗೀಯ ಆಯುಕ್ತರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ. ಈ ಚುನಾವಣೆಯ ಉಸ್ತುವಾರಿಗಾಗಿ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಚುನಾವಣೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ವಿವಿಧ ತಂಡ ನೇಮಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಬಕಾರಿ ಇಲಾಖೆ ಉಪ ಆಯುಕ್ತರು, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ, ನಗರ ಪಾಲಿಕೆ ಮುಖ್ಯ ಆಡಳಿತಾಧಿಕಾರಿ, ಕಂದಾಯ ಅಧಿಕಾರಿಗಳು, ಅಬಕಾರಿ ಅಧೀಕ್ಷಕರು, ಕೋಟೆ, ದೊಡ್ಡಪೇಟೆ ಸಿಪಿಐ ತಂಡದಲ್ಲಿರುವರು’ ಎಂದು ವಿವರ ನೀಡಿದರು.

‘ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರಕ್ಕೆ ತಲಾ 32 ಮತಗಟ್ಟೆಗಳನ್ನು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು. ಚುನಾವಣಾ ಕಾರ್ಯಕ್ಕಾಗಿ 270 ಸಿಬ್ಬಂದಿ, 70 ಸೂಕ್ಷ್ಮ ವೀಕ್ಷಕರು ಹಾಗೂ 70 ಪೊಲೀಸರನ್ನು ಬಳಸಿಕೊಳ್ಳಲಾಗುವುದು. ಜತೆಗೆ, ಪ್ರತಿ ತಾಲ್ಲೂಕಿಗೂ 2 ವಿಚಕ್ಷಣ ದಳ ನೇಮಿಸಲಾಗಿದೆ’ ಎಂದರು.

‘ಮತಪೆಟ್ಟಿಗೆಗಳನ್ನು ಆಯಾ ತಾಲ್ಲೂಕು ಕಚೇರಿಗಳಿಂದ ಮತಕೇಂದ್ರಕ್ಕೆ ರವಾನಿಸಿ ನಂತರ ಅವುಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಗ್ರಹಿಸಲಾಗುವುದು. ಅಂತಿಮವಾಗಿ ಕ್ರೋಡೀಕರಿಸಿದ ಮತಪೆಟ್ಟಿಗೆಗಳನ್ನು ಮೈಸೂರಿನ ವಿಭಾಗೀಯ ಆಯುಕ್ತರ ಕಚೇರಿಗೆ ತಲುಪಿಸಲಾಗುತ್ತದೆ’ ಎಂದರು.

‘ರಾಜ್ಯದ ಶಿಕ್ಷಕರು ಹಾಗೂ ಪದವೀಧರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯಕ್ರಮ ಪ್ರಕಟಿಸುವಂತಿಲ್ಲ. ಸಚಿವರು ಯಾವುದೇ ವಿದ್ಯಾಸಂಸ್ಥೆಗಳು ಮತ್ತು ಪದವೀಧರ ಕ್ಷೇತ್ರಗಳಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಸುವಂತಿಲ್ಲ’ ಎಂದು ಹೇಳಿದರು.

‘ಅಭ್ಯರ್ಥಿಗಳು ಪ್ರಕಟಿಸುವ ಜಾಹೀರಾತು, ಪ್ರಚಾರದ ಮೇಲೆ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿ ಕಣ್ಗಾವಲು ಇಡುತ್ತದೆ. ಯಾವುದೇ ಜಾಹೀರಾತು ಮತ್ತು ಟಿ.ವಿ. ಕೇಬಲ್, ರೇಡಿಯೊ, ಎಫ್ಎಂ. ಚಾನಲ್‌ಗಳಲ್ಲಿ ಪ್ರದರ್ಶಿಸುವ ಪೂರ್ವದಲ್ಲಿ ಸಮಿತಿಯ ಅನುಮತಿ ಕಡ್ಡಾಯ. ಮತದಾನ ದಿನ 48 ಗಂಟೆಗಳ ಪೂರ್ವದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಿಷೇಧಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ರಾಕೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಇದ್ದರು.

ರಮೇಶ್ ನಾಮಪತ್ರ ಸಲ್ಲಿಕೆ

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಎಂ.ರಮೇಶ್ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತೆ  ಹೇಮಲತಾ ಅವರಿಗೆ ನಾಮಪತ್ರ ಸಲ್ಲಿಸಿದರು.

ಚುನಾವಣಾ ವೇಳಾಪಟ್ಟಿ ವಿವರ

ನಾಮಪತ್ರ ಸಲ್ಲಿಸಲು ಕೊನೆ ದಿನ ಮೇ 22
ನಾಮಪತ್ರ ಪರಿಶೀಲನೆ ಮೇ 23
ನಾಮಪತ್ರ ಹಿಂಪಡೆಯಲು ಕೊನೆ ದಿನ ಮೇ 25
ಮತದಾನದ ದಿನ ಜೂನ್ 8
ಮತ ಎಣಿಕೆ ಜೂನ್ 12
ಚುನಾವಣೆ ಪ್ರಕ್ರಿಯೆ ಪೂರ್ಣ ಜೂನ್ 15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.