ADVERTISEMENT

ಪಂಚಕಲ್ಯಾಣೋತ್ಸವ: ಗಮನ ಸೆಳೆದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 7:15 IST
Last Updated 14 ಫೆಬ್ರುವರಿ 2011, 7:15 IST

ಚನ್ನರಾಯಪಟ್ಟಣ: ಜಗ್ಗಲಿಕೆ ಮೇಳ.. ಬೆಳ್ಳಿ ಪಲ್ಲಕ್ಕಿ ಉತ್ಸವ... ಧವಲ ಗ್ರಂಥಗಳು... ಕಳಸಹೊತ್ತು ಸಾಗಿದ ಪುಟಾಣಿಗಳು.... ವಿವಿಧ ಸ್ತಬ್ಧ ಚಿತ್ತಾಕರ್ಷಕ ಮೆರವಣಿಗೆ...
ಜಗತ್ತಿಗೆ ಶಾಂತಿ, ಅಹಿಂಸೆ, ತ್ಯಾಗದ ಸಂದೇಶ ಸಾರಿದ ಭಗವಾನ್ ಬಾಹುಬಲಿ ನೆಲೆಸಿರುವ ಶ್ರೀಕ್ಷೇತ್ರದ ಶ್ರವಣಬೆಳಗೊಳದಲ್ಲಿ ಭಾನುವಾರ ‘ನವನಿರ್ಮಿತ ರತ್ನತ್ರಯ ಜಿನಮಂದಿರ ವಾಸ್ತು ವಿಧಾನ ಮತ್ತು ಶಾಂತಿನಾಥ ತೀರ್ಥಂಕರರ ಪಂಚಕಲ್ಯಾಣ ಪೂಜಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯವಿದು.

ಜಿನನಾಥಪುರದ ಶಾಂತಿನಿವಾಸ ಜಿನಾಲಯ, ಬೆಟ್ಟಗುಡಗಳ ನಡುವೆ ಶಾಂತಿಪುರಾಣ ಬರೆಯುತ್ತಿರುವ ಕಮಲಭವ ಕವಿ, ಶಾಂತಿನಾಥ ಪುರಾಣವನ್ನು ದಾನಮಾಡುತ್ತಿರುವ ಅತ್ತಿಮಬ್ಬೆ, ರಾಜನ ಆಸ್ಥಾನದಲ್ಲಿ ಶಾಂತಿನಾಥ ಪುರಾಣ ರಚಿಸುತ್ತಿರುವ ಪೊನ್ನಕವಿ, ಮೇರುಪರ್ವತದಲ್ಲಿ ಶಾಂತಿನಾಥನ ಜನ್ಮಾಭಿಷೇಕ ಸಾರುವ ಸ್ತಬ್ಧ ಚಿತ್ರಗಳು ಗಮನಸೆಳೆದವು.

ಜಾನಪದ ಸಂಸ್ಕೃತಿ ಬಿಂಬಿಸುವ ಚಂಡೆ, ಕೊಂಬು-ಕಹಳೆ, ಜಗ್ಗಲಿಕೆ ಮೇಳ, ಕೋಲಾಟ, ಡೊಳ್ಳು ಕುಣಿತದ ನೃತ್ಯ ಮೆರವಣಿಗೆಗೆ ಕಳೆ ನೀಡಿತು. ಸಮವಸ್ತ ಧರಿಸಿದ ನೂರಾರು ಮಹಿಳೆಯರು ಶಾಂತಿನಾಥ, ಬಾಹುಬಲಿಯ ನಾಮ ಜಪಿಸುತ್ತ ಸಾಗಿದರು. ಶ್ವೇತವಸ್ತ್ರಧಾರಿಗಳಾದ ಯುವಕರು ವಾದ್ಯದ ನಾದಕ್ಕೆ ಹೆಜ್ಜೆ ಹಾಕುತ್ತ ನಡೆದರು. 28 ಪುಟಾಣಿ ಮಕ್ಕಳು ಕಳಸ ಹೊತ್ತು ಸಾಗಿದ್ದು ವಿಶೇಷ. ಧವಲ, ಜಯಧವಲ, ಮಹಧವಲ ಗ್ರಂಥ ಪಲ್ಲಕಿಯಲ್ಲಿ ಕೊಂಡೊಯ್ಯಲಾಯಿತು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿದ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನತೆ ವೀಕ್ಷಿಸಿದರು. ಹೊರರಾಜ್ಯ, ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿದ್ದ ಜೈನ ಬಾಂಧವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನಾ ಕ್ಷೇತ್ರದ ಪೀಠಾಧಿಕಾರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಮಾಜದ ಮುಖಂಡ ಸತೀಶ್‌ಚಂದ್ ಜೈನ್, ಚಾವುಂಡರಾಯ ಮಂಟಪದ ಬಳಿ ಮೆರವಣಿಗೆಗೆ ಚಾಲನೆ ನೀಡಿದರು.
 
ಸಂದೇಶ ಸಾರಿ ಗರ್ಭಾವತರಣ ಕಲ್ಯಾಣೋತ್ಸವ: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಶಾಂತಿನಾಥ ತೀರ್ಥಂಕರರ ಜನ್ಮವೃತ್ತಾಂತ ಸಾರುವ ಗರ್ಭಾವತರಣ ಕಲ್ಯಾಣೋತ್ಸವ ಶನಿವಾರ ರಾತ್ರಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಮಾತೆ ಐರಾದೇವಿ, ಶಾಂತಿನಾಥ ತೀರ್ಥಂಕರರಿಗೆ ಜನ್ಮನೀಡುವ ಮುನ್ನಾ ಕಾಣುವ 16 ಸ್ವಪ್ನಗಳನ್ನು ಪಾತ್ರಗಳ ಮೂಲಕ ಜೈನ ಸಮಾಜದವರು ಪ್ರದರ್ಶಿಸಿದರು. ಹಾಸನದ ಭಾರತೀಯ ನೃತ್ಯ ಶಾಲೆಯ ಮಕ್ಕಳು ಸಭೆಯಲ್ಲಿ ನೃತ್ಯ ಪ್ರದರ್ಶಿಸಿದರು. ಕ್ಷೇತ್ರದ ಪೀಠಾಧಿಕಾರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂದಬಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಕೀರ್ತಿ, ಜೈನ ಧರ್ಮಿಯರು ಕಾರ್ಯಕ್ರಮ ವೀಕ್ಷಿಸಿದರು. ಫೆ.10 ರಿಂದ ಆರಂಭವಾಗಿರುವ ನವನಿರ್ಮಿತ ರತ್ನತ್ರಯ ಜಿನಮಂದಿರದ ವಾಸ್ತುವಿಧಾನ ಮತ್ತು ಶಾಂತಿನಾಥ ತಿರ್ಥಂಕರರ ಪಂಚಕಲ್ಯಾಣೋತ್ಸವ ಮಹೋತ್ಸವ ಫೆ. 16ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.