ADVERTISEMENT

ಪಾರದರ್ಶಕ ಆಡಳಿತದಿಂದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ತರೀಕೆರೆ: ‘ಪಾರದರ್ಶಕ ಆಡಳಿತದ ಮೂಲಕ ಪುರಸಭೆಯಲ್ಲಿ ಸಂಪೂರ್ಣ ಬದಲಾವಣೆ ತಂದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ  ಶ್ರಮಿಸುತ್ತೇನೆ’ ಎಂದು ಪುರಸಭೆ ನೂತನ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಭರವಸೆ ನೀಡಿದರು.ಪುರಸಭೆಯ ನೂತನ ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾದ ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣ ಅಭಿವೃದ್ದಿಪಡಿಸುವುದಾಗಿ ತಿಳಿಸಿದರು. 

ಪುರಸಭೆ ವ್ಯಾಪಿಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ರೂ 5 ಕೋಟಿ ಹಣ ಮಂಜೂರಾಗಿದೆ. ಅದರಲ್ಲಿ ರೂ 3.75 ಕೋಟಿ ವೆಚ್ಚದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 11 ಪ್ಯಾಕೇಜ್‌ಗಳಲ್ಲಿ ಈ ಕಾರ್ಯ ಆರಂಭವಾಗಿದೆ.ಡಾಂಬರೀಕರಣ, ಕಾಂಕ್ರೀಟ್ ರಸ್ತೆಗಳು, ಚರಂಡಿ ವ್ಯವಸ್ಥೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾದ ಕೆಲಸ  ಆರಂಭವಾಗಿದೆ ಎಂದು ಅವರು ತಿಳಿಸಿದರು.

ಸ್ಮಶಾನ ಅಭಿವೃದ್ದಿಗೆ  ರೂ 45 ಲಕ್ಷ, ಲಿಂಗದಹಳ್ಳಿ ರಸ್ತೆಗೆ ಬೀದಿ ದೀಪ ಅಳವಡಿಕೆ, ಡಿ.ಜಿ.ರಸ್ತೆ, ನಾಗಪ್ಪ ಕಾಲೊನಿ ರಸ್ತೆ, ಅಭಿವೃದ್ದಿ ಕಾರ್ಯ, ಗಾಳಿಹಳ್ಳಿ ಕ್ರಾಸ್ ಪ್ರದೇಶದ ಅಭಿವೃದ್ದಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದರು.ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಸುವರ್ಣಮ್ಮ ಮಾತನಾಡಿ, ಪಟ್ಟಣದ ಅಭಿವೃದ್ದಿ ಕಾರ್ಯಗಳಲ್ಲಿ ಅಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಮಾಜಿ ಶಾಸಕರಾದ ಟಿ.ಎಚ್.ಶಿವಶಂಕರಪ್ಪ, ಬಿ.ಆರ್.ನೀಲಕಂಠಪ್ಪ, ಎಸ್.ಎಂ.ನಾಗರಾಜ್, ಕೆಪಿಸಿಸಿ ಸದಸ್ಯ ಟಿ. ಶಿವಶಂಕರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ಘನಿ ಅನ್ವರ್, ನಿಕಟಪೂರ್ವ ಅಧ್ಯಕ್ಷ ಆರ್. ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ  ಪ್ರಕಾಶ್‌ವರ್ಮ ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.