ADVERTISEMENT

ಪುರಸಭೆ ಆವರಣದಲ್ಲಿ ಪಾರ್ಕಿಂಗ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಚನ್ನರಾಯಪಟ್ಟಣ: ಇಲ್ಲಿನ ಪುರಸಭೆಯ ಪ್ರವೇಶ ದ್ವಾರದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲದೆ, ಕಚೇರಿ ಕೆಲಸಕ್ಕೆ ಆಗಮಿಸುವ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಪಟ್ಟಣದ ಹಳೆ ಬಸ್ ನಿಲ್ದಾಣ ಬಳಿಯ ಪುರಸಭೆ ಪ್ರವೇಶ ದ್ವಾರದಲ್ಲಿ ಬೈಕ್‌ಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಅಲ್ಲಿ ಸಂಚರಿಸುವ ಜನರು ಬೈಕ್ ಅನ್ನು ಪಕ್ಕಕ್ಕೆ ಸರಿಸಿ ಹೋಗಲು ಹರಸಾಹಸ ಪಡುತ್ತಾರೆ. ಎಲ್ಲೆಂದರಲ್ಲಿ ಬೈಕ್‌ಗಳ ನಿಲುಗಡೆಯಿಂದ ಕಚೇರಿ ಕೆಲಸಕ್ಕೆ ಬರುವ ಜನರು ಕಷ್ಟಪಟ್ಟು ಒಳಗೆ ಪ್ರವೇಶಿಸುತ್ತಿದ್ದಾರೆ. ಈ ಅವಾಂತರ ತಡೆಗಟ್ಟಲು ಪುರಸಭೆ ವತಿಯಿಂದ ಈಚೆಗೆ `ವಾಹನ ನಿಲುಗಡೆ ನಿಷೇಧಿಸಲಾಗಿದೆ~ ಎಂಬ ನಾಮಫಲಕ ಹಾಕಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅಲ್ಲಿಂದ ಫಲಕ ನಾಪತ್ತೆಯಾಗಿದ್ದು, ಎಂದಿನಂತೆ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದೆ.

ದೂರದ ಊರಿಗೆ ತೆರಳುವರು ಇಲ್ಲಿಯೇ ಬೈಕ್ ನಿಲ್ಲಿಸಿ ಹೋಗುತ್ತಾರೆ. ಕೆಲವು ವರ್ತಕರು ಸಹ ವಾಹನ ಪಾರ್ಕ್ ಮಾಡುತ್ತಾರೆ. ಇದರಿಂದ ದಿನವಿಡೀ ಬೈಕ್ ಅದೇ ಸ್ಥಳದಲ್ಲೇ ನಿಂತು ಜನರ ಓಡಾಟಕ್ಕೆ ತೊಂದರೆಯಾಗುತ್ತದೆ. ವಾಹನಕ್ಕೆ ಸಿಲುಕಿ ಕೆಲವರು ಬಟ್ಟೆ ಹರಿದುಕೊಂಡಿದ್ದಾರೆ. ಮತ್ತೆ ಕೆಲವರು ಧಾವಂತದಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ದ್ವಿಚಕ್ರವಾಹನಗಳಿಂದ ಉಂಟಾಗುವ ಕಿರಿಕಿರಿ ಬಗ್ಗೆ ಹಿಂದೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದೆ. ದ್ವಿಚಕ್ರ ವಾಹನ ಮಾಲೀಕರಿಗೆ ದಂಡ ವಿಧಿಸಿದರೆ ಮಾತ್ರ ಇಂತಹ ಪ್ರಕ್ರಿಯೆ ನಿಲ್ಲುತ್ತದೆ. ಆದ್ದರಿಂದ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.