ADVERTISEMENT

ಪುಸ್ತಕಗಳಿಗೆ ತನ್ನದೇ ಆದ ವ್ಯಕ್ತಿತ್ವ ಇದೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST
ಪುಸ್ತಕಗಳಿಗೆ ತನ್ನದೇ ಆದ ವ್ಯಕ್ತಿತ್ವ ಇದೆ
ಪುಸ್ತಕಗಳಿಗೆ ತನ್ನದೇ ಆದ ವ್ಯಕ್ತಿತ್ವ ಇದೆ   

ಶಿವಮೊಗ್ಗ: ಇಂದಿನ ಕಂಪ್ಯೂಟರ್ ಯುಗದಲ್ಲಿ ಪುಸ್ತಕ ಒಂದು ಸವಾಲಾಗಿ ಪರಿಣಮಿಸಿದ್ದು, ಪುಸ್ತಕಕ್ಕೇ ತನ್ನದೇ ಆದ ವ್ಯಕ್ತಿತ್ವ ಇದೆ ಎಂದು ಲೇಖಕ ಪ್ರೊ.ಎಂ.ಬಿ. ನಟರಾಜ್ ಅಭಿಪ್ರಾಯಪಟ್ಟರು.

ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಗ್ರಂಥಾಲಯ ವಿಭಾಗ ಸೋಮವಾರ ವಿಶ್ವ ಪುಸ್ತಕ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬರೆಯುವ ಬರಹಗಾರ ಹೇಗೆಯೇ ಇರಲಿ, ಪುಸ್ತಕ ಆತನನ್ನು ಹಿಂದಕ್ಕೆ ಹಾಕುವ ಶಕ್ತಿ ಪಡೆದುಕೊಂಡಿದೆ. ಕುಮಾರವ್ಯಾಸ, ರಾಘವಾಂಕ, ನೃಪತುಂಗ ಮುಂತಾದವರ ಗ್ರಂಥಗಳು ಇಂದಿಗೂ ನಮ್ಮ ಸ್ಮೃತಿಪಟಲದಲ್ಲಿವೆ ಎಂದರು.

ಮನುಷ್ಯ ಹಾಗೂ ಪುಸ್ತಕದ ನಡುವೆ ವೈಯಕ್ತಿಕ ಸಂಬಂಧ ಅನಾದಿಕಾಲದಿಂದಲೂ ಇದೆ ಎಂದ ಅವರು, ನಿಜಜೀವನಕ್ಕೆ ಹೋಗಲು ಪುಸ್ತಕ ಪ್ರೇರಣೆ ನೀಡುತ್ತದೆ ಎಂದರು.

ಜ್ಞಾನದ ಪರಂಪರೆ ಬೆಳೆಸುವ ಪುಸ್ತಕದ ಜತೆಗಿನ ಸಂಬಂಧ ಕಡಿಮೆಯಾಗುತ್ತಿರುವ ಬಗ್ಗೆ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.

ಪುಸ್ತಕ ಪ್ರದರ್ಶನ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿ, ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ನ ಜನ್ಮದಿನದ ಅಂಗವಾಗಿ ವಿಶ್ವಸಂಸ್ಥೆಯ ನಿರ್ದೇಶನದಂತೆ ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ವಿದೇಶಿಯರು ಭಾರತದ ಮೇಲೆ ದಂಡೆತ್ತಿ ಬಂದು ವಿಜಯ ಸಾಧಿಸಿದಾಗ ಇಲ್ಲಿನ ಜ್ಞಾನ ಹಾಳು ಮಾಡಲೆಂದೇ ಗ್ರಂಥರಾಶಿಗಳನ್ನು ಧ್ವಂಸಗೊಳಿಸಿದ ಎಷ್ಟೋ ಉದಾಹರಣೆಗಳಿವೆ ಎಂದು ಹೇಳಿದರು.

 ಗ್ರಂಥಪಾಲಕ ಜಗದೀಶ ಕಮಲಾಕರ ಸ್ವಾಗತಿಸಿದರು. ಡಾ.ಬಾಲಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಡಾ.ನಾಗಭೂಷಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.