ADVERTISEMENT

ಪುಸ್ತಕಗಳ ಗಣಕೀಕರಣ ಯೋಜನೆ ನೆನೆಗುದಿಗೆ

ಎಂ.ಮಹೇಶ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ದಾವಣಗೆರೆ: ರಾಜ್ಯ ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ವತಿಯಿಂದ `ಸುವರ್ಣ ಕರ್ನಾಟಕ ಡಿಜಿಟಲ್ ಲೈಬ್ರರಿ ಯೋಜನೆ~ಯಡಿ ಒಂದು ಲಕ್ಷ ಕನ್ನಡ ಪುಸ್ತಕಗಳನ್ನು ಡಿಜಿಟಲೀಕರಣದ ಮೂಲಕ ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯಕ್ರಮ ನೆನೆಗುದಿಗೆ ಬಿದ್ದಿದೆ.

`ಸುವರ್ಣ ಕರ್ನಾಟಕ~ ವರ್ಷಾಚರಣೆ ಹಿನ್ನೆಲೆಯಲ್ಲಿ 2006ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಪ್ರಪಂಚದಾದ್ಯಂತ ಕನ್ನಡ ಪುಸ್ತಕಗಳು ಓದುವುದಕ್ಕೆ ದೊರೆಯುವಂತಾಗಬೇಕು.

ಇದಕ್ಕಾಗಿ ಅಂತರ್ಜಾಲದಲ್ಲಿ ಪುಸ್ತಕಗಳನ್ನು ಅಳವಡಿಸಬೇಕು ಎಂಬ ಮಹತ್ವದ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಒಂದು ವರ್ಷದ ಒಳಗೆ ಅಂತರ್ಜಾಲಕ್ಕೆ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸ್ದ್ದಿದರು. ಆದರೆ, ಐದು ವರ್ಷ ಕಳೆದರೂ ಯೋಜನೆ ಅನುಷ್ಠಾನಗೊಂಡಿಲ್ಲ!
ಪಿ.ವೈ. ರಾಜೇಂದ್ರಕುಮಾರ್ ಅವರು ಇಲಾಖೆಯ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿತ್ತು. ಅಮೆರಿಕಾದ ವಿಶ್ವವಿದ್ಯಾಲಯ ಒಂದರ ಸಹಯೋಗದಲ್ಲಿ ಅನುಷ್ಠಾನಕ್ಕೆ ಉದ್ದೇಶಿಸಲಾಗಿತ್ತು.

ಬೆಂಗಳೂರಿನ ಪಶ್ಚಿಮ ಗ್ರಂಥಾಲಯ ಹಾಗೂ ಕಬ್ಬನ್‌ಪಾರ್ಕ್‌ನಲ್ಲಿರುವ ಗ್ರಂಥಾಲಯದಲ್ಲಿ ಈ ಸಂಬಂಧ ಚಟುವಟಿಕೆಗಳು ಆರಂಭವಾಗಿದ್ದವು. ಕೆಲ ತಿಂಗಳ ಕಾಲ ಈ ಗಣಕೀಕರಣ ಕಾರ್ಯ ನಡೆದಿತ್ತು. ಸುಮಾರು 36 ಸಾವಿರ ಪುಸ್ತಕಗಳ 49 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಿ, ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿತ್ತು.

ಇದಕ್ಕಾಗಿ 26 ಕಂಪ್ಯೂಟರ್‌ಗಳು ಹಾಗೂ ರೂ 18 ಲಕ್ಷ ಮಾಲ್ಯದ 10 ಸ್ಕ್ಯಾನರ್‌ಗಳನ್ನು ಖರೀದಿಸಲಾಗಿತ್ತು. ಕೇಂದ್ರ ಸರ್ಕಾರದಿಂದಲೂ ಇದಕ್ಕಾಗಿ ನೆರವು ಪಡೆಯಲು ಉದ್ದೇಶಿಸಲಾಗಿತ್ತು.

`ಗಣಕೀಕರಣ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಲ್ಲಿ ಒಂದು ಲಕ್ಷ ಪುಸ್ತಕಗಳನ್ನು ಪ್ರಪಂಚದ ಯಾವುದೇ ಭಾಗದವರು ಅಂತರ್ಜಾಲದಲ್ಲಿ ಓದಬಹುದಾಗಿತ್ತು. ಯೋಜನೆ ಯಾವ ಹಂತದಲ್ಲಿದೆ ಎಂಬುದು ಗೊತ್ತಿಲ್ಲ.

ಯೋಜನೆಗಾಗಿ ಖರೀದಿಸಿದ ಸ್ಕ್ಯಾನರ್‌ಗಳು ದೂಳು ತಿನ್ನುತ್ತಿವೆ. ಉತ್ತಮ ಯೋಜನೆಯೊಂದು ಪೂರ್ಣಗೊಳ್ಳಲಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.
ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ವೆಂಕಟೇಶ್, `ಈ ಸಂಬಂಧ ಒಂದಷ್ಟು ಕೆಲಸ ನಡೆದಿತ್ತು. ನಂತರ ಏನಾಗಿದೆ ಗೊತ್ತಿಲ್ಲ.

ನಿರ್ದೇಶಕರ ಹಂತದಲ್ಲಿ ಪ್ರಕ್ರಿಯೆಗಳು ನಡೆಯುತ್ತವೆ. ಪ್ರಸ್ತುತ, ಪುಸ್ತಕಗಳ ಗಣಕೀಕರಣ ಕಾರ್ಯ ನಡೆಯುತ್ತಿಲ್ಲ~ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.