ರಾಯಚೂರು: ಅತಿಥಿ ಶಿಕ್ಷಕರ ನೇಮಕ ಕೈ ಬಿಡಬೇಕು, ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಎಲ್ಲ ಶಿಕ್ಷಕರ ಹುದ್ದೆಗಳಿಗೆ ಕೂಡಲೇ ಕಾಯಂ ನೇಮಕಾತಿ ಮಾಡಬೇಕು ಎಂದು ಎಂದು ಆಗ್ರಹಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ) ಜಿಲ್ಲಾ ಸಮಿತಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹೋರಾಟ ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಹೆಚ್ಚುವರಿ ಶಿಕ್ಷಕರ ಪಟ್ಟಿ ಕೈ ಬಿಡಬೇಕು. ವಿವಿಧ ಶಿಕ್ಷಣ ಸಮಿತಿಗಳ ಶಿಫಾರಸಿನಂತೆ ವಿಷಯವಾರು, ತರಗತಿವಾರು, ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.ಮೂರುವರೆ ವರ್ಷಗಳಿಂದ ಡಿಇಡಿ, ಟಿಸಿಎಚ್ ತರಬೇತಿ ಪಡೆದ ಲಕ್ಷಾಂತರ ನಿರುದ್ಯೋಗಿ ಶಿಕ್ಷಕರು ಉದ್ಯೋಗಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರು.
ವಿಷಯವಾರು ಹಾಗೂ ತರಗತಿವಾರು ಶಿಕ್ಷಕರು ಇರಬೇಕು ಎಂಬುದನ್ನು ಬಿಟ್ಟು ಕೇವಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು 29:1 ಅನುಪಾತ ಅನುಸರಿಸಿ ಹೆಚ್ಚುವರಿ ಶಿಕ್ಷಕರನ್ನು ಪಟ್ಟಿ ಮಾಡಿ ವರ್ಗಾವಣೆ ಮಾಡುತ್ತಿರುವುದು ಉದ್ಯೋಗ ವಿರೋಧಿ ನೀತಿಯಾಗಿದೆ ಎಂದು ಆಪಾದಿಸಿದರು.
14 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಸರ್ಕಾರ ಹೇಳುತ್ತದೆ. ಆದರೆ ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಇದನ್ನು ಸಂಘಟನೆ ವಿರೋಧಿಸುತ್ತದೆ ಎಂದರು.ಸಂಘಟನೆ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ, ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹೋರಾಟ ಸಮಿತಿ ಸಹ ಸಂಚಾಲಕ ಗಂಗಾಧರ, ಗುಂಡಪ್ಪ, ಸದ್ದಾಂ ಹುಸೇನ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.